

ಬಂಟ್ವಾಳ: ಮುರಿದು ಬಿದ್ದ ಬಾಗಿಲು, ಸ್ವಚ್ಛವಿಲ್ಲದ ಟಾಯ್ಲೆಟ್, ಪಾನ್ ಪರಾಗ್ ತಿಂದು ಉಗುಳಿದ ಗೋಡೆಗಳು, ತುಕ್ಕು ಹಿಡಿದ ಆಡಳಿತ ಯಂತ್ರಗಳು ಒಟ್ಟಾರೆಯಾಗಿ ಜಡತ್ವದ ಚೌಕಟ್ಟಿನಲ್ಲಿರುವ ಬಂಟ್ವಾಳ ಆಡಳಿತ ಸೌಧದ ಕಚೇರಿಯ ಅವ್ಯವಸ್ಥೆಯ ಬಗ್ಗೆ ಹೇಳಿದಷ್ಟು ಕಡಿಮೆಯೇ.
ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಮೇಲಾಧಿಕಾರಿಗಳು ಒಮ್ಮೆ ಭೇಟಿ ಕೊಡಿ ಎಂಬ ಒತ್ತಾಯಗಳು ಸಾರ್ವಜನಿಕರಿಂದ ಕೇಳಿ ಬಂದಿವೆ. ಆಡಳಿತ ಸೌಧದ ಕಚೇರಿಗೆ ಪ್ರವೇಶ ಮಾಡಿದ ನಂತರ ಒಂದನೇ ಮತ್ತು ಎರಡನೇ ಮಹಡಿಗೆ ಮೆಟ್ಟಿಲುಗಳ ಮೇಲೆ ಹತ್ತಿಕೊಂಡು ಹೋಗಬೇಕಾದರೆ ನಿಮ್ಮನ್ನು ಕೆಂಪು ಬಣ್ಣ ತುಂಬಿದ ಗೋಡೆಗಳು ಸ್ವಾಗತಿಸುತ್ತವೆ.

ಪಾನ್ ಪರಾಗ್ ಅಥವಾ ಎಲೆ ಅಡಿಕೆ ತಿಂದು ಉಗುಳಿದ್ದು ಗೋಡೆಗಳ ಅಂದವನ್ನು ಕೆಡಿಸಿದೆ. ಇನ್ನು ಇಲ್ಲಿನ ಶೌಚಾಲಯದ ಬಗ್ಗೆ ಅಂತೂ ಹೇಳೋದೇ ಬೇಡ. ಇಲ್ಲಿನ ಶೌಚಾಲಯದ ಬಾಗಿಲು ಮುರಿದು ಹೋಗಿದ್ದು ಮೂತ್ರ ಶಂಕೆಯ ಬೇಸಿನ್ ತುಂಬಿ ತುಳುಕುತ್ತಿದೆ.
ಮಾರಣಾಂತಿಕ ಕಾಯಿಲೆಗಳಿಗೆ ಪ್ರೇರಣೆಯಾಗುವಂತಿದೆ. ಶುಚಿತ್ವವಿಲ್ಲದ ಇಲ್ಲಿನ ಅವ್ಯವಸ್ಥೆಯ ಬಗ್ಗೆ ತಹಶಿಲ್ದಾರ್ ಅವರು ಗಮನಹರಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.