October 20, 2025
WhatsApp Image 2025-10-20 at 9.33.17 AM

ಮಂಗಳೂರು: ಇಬ್ಬರು ಸ್ನೇಹಿತೆಯರು ಬಟ್ಟೆ ಬದಲಾಯಿಸುವ ವೇಳೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಆರೋಪದಡಿ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಳಸದ ಪ್ರಸಕ್ತ ನಗರದ ಕಂಕನಾಡಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನಿರೀಕ್ಷಾ ಎಂಬಾಕೆಯನ್ನು ಕದ್ರಿ ಪೋಲೀಸರು ರವಿವಾರ ಬಂಧಿಸಿದ್ದಾರೆ.

ಆರೋಪಿ ನಿರೀಕ್ಷಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆಕೆಗೆ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಿರೀಕ್ಷಾಳ ಸ್ನೇಹಿತೆಯರಾದ ಇಬ್ಬರು ಯುವತಿಯರು ಕದ್ರಿ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ಕಾರ್ಕಳದ ನಿಟ್ಟೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಅಭಿಷೇಕ್ ಆಚಾರ್ಯ ತನ್ನ ಡೆತ್‌ನೋಟ್‌ನಲ್ಲಿ ನಿರೀಕ್ಷಾ ತನ್ನ ಸ್ನೇಹಿತೆಯರು ಬಟ್ಟೆ ಬದಲಾಯಿಸುವ ವಿಡಿಯೋ ಮಾಡಿ ಬೇರೆಯವರಿಗೆ ಕಳುಹಿಸಿರುವುದಾಗಿ ಬರೆದಿದ್ದುದು ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆರೋಪಿ ನಿರೀಕ್ಷಾಳು ಅಭಿಷೇಕ್‌ಗೂ ವಿಡಿಯೋ ಕಳುಹಿಸಿದ್ದಳು. ಆ ವಿಡಿಯೋ ಅಭಿಷೇಕ್ ಅಡ್ಮಿನ್ ಆಗಿದ್ದ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಫಾರ್ವರ್ಡ್ ಆಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತನಿಖೆಯ ವೇಳೆ ನಿರೀಕ್ಷಾ ಆ ವಿಡಿಯೋವನ್ನು ರಹಸ್ಯವಾಗಿ ಚಿತ್ರೀಕರಿಸಿದ್ದಾಳೆ ಎಂಬುದು ಬಹಿರಂಗವಾಗಿದ್ದು, ನಂತರ ಆ ವಿಡಿಯೋವನ್ನು ಅಭಿಷೇಕ್ ಹಂಚಿಕೊಂಡಿದ್ದಾನೆ ಎಂಬುದೂ ಪತ್ತೆಯಾಗಿದೆ. ಇದರ ಆಧಾರದ ಮೇಲೆ ಪೊಲೀಸರು ನಿರೀಕ್ಷಾಳನ್ನು ಬಂಧಿಸಿ, ಮಾನ್ಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

ಪೊಲೀಸರ ಪ್ರಕಾರ, ಆ ವಿಡಿಯೋ ಚಿತ್ರೀಕರಣ ಮಂಗಳೂರು ನಗರ ವ್ಯಾಪ್ತಿಯಲ್ಲಿಯೇ ನಡೆದಿದೆ, ಆದ್ದರಿಂದ ಆ ಭಾಗದ ತನಿಖೆಯನ್ನು ಮಂಗಳೂರು ನಗರ ಪೊಲೀಸರು ನಡೆಸುತ್ತಿದ್ದಾರೆ.

ಇನ್ನೊಂದೆಡೆ, ಅಭಿಷೇಕ್ ಆತ್ಮಹತ್ಯೆ ಪ್ರಕರಣದ ತನಿಖೆ ಉಡುಪಿ ಜಿಲ್ಲೆ ಪೊಲೀಸರು ನಡೆಸುತ್ತಿದ್ದು, ಲಭ್ಯವಿರುವ ಸಾಕ್ಷ್ಯ ಮತ್ತು ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ, ನಿರೀಕ್ಷಾ ಮತ್ತು ಮತ್ತೊಬ್ಬ ಯುವಕನ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ “ನ್ಯಾಯ ಕೊಡಬೇಕು” ಎಂದು ಹೇಳಿದವರ ವಿರುದ್ಧವೂ ಮತ್ತೊಂದು ಪ್ರಕರಣ ದಾಖಲಾಗಿದೆ.

ಪೊಲೀಸರು ಎಚ್ಚರಿಕೆ ನೀಡುತ್ತಾ, “ಯಾರಾದರೂ ನ್ಯಾಯ ಕೇಳಬೇಕೆಂದರೆ ಕಾನೂನು ಬಾಹ್ಯವಾಗಿ ಫೋಟೋ ಅಥವಾ ವಿಡಿಯೋ ಸ್ಕ್ರೀನ್‌ಶಾಟ್‌ಗಳನ್ನು ಹಂಚದೇ ಕೇಳಬಹುದು. ಇಂತಹ ಚಿತ್ರಗಳು ಅಥವಾ ವಿಡಿಯೋಗಳನ್ನು ಹಂಚುವುದು ಅಪರಾಧವಾಗಿದೆ” ಎಂದು ತಿಳಿಸಿದ್ದಾರೆ.

About The Author

Leave a Reply