

ಸುರತ್ಕಲ್: ಪೊಲೀಸ್ ಠಾಣಾ ವ್ಯಾಪ್ತಿಯ ಕಾನ ಎಂಬಲ್ಲಿನ ದೀಪಕ್ ಬಾರ್ ಮುಂಭಾಗ ಇಬ್ಬರು ಯುವಕರ ಮೇಲೆ ದುಷ್ಕರ್ಮಿಗಳ ತಂಡ ಚೂರಿಯಿಂದ ಇರಿದು ಪರಾರಿಯಾದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ. ಸುರತ್ಕಲ್ ಚೊಕ್ಕಬೆಟ್ಟು ನಿವಾಸಿ ನಿಝಾಮ್ (23) ಮತ್ತು ಕೃಷ್ಣಾಪುರ ಹಿಲ್ ಸೈಡ್ ನಿವಾಸಿ ಹಸನ್ ಮುರ್ಷಿದ್ (18) ಗಾಯಗೊಂಡವರು.
ಆರೋಪಿಗಳನ್ನು ಬಜರಂಗದಳ ಕಾರ್ಯಕರ್ತ ಸುರತ್ಕಲ್ ಠಾಣೆಯ ರೌಡಿಶೀಟರ್ ಗುರುರಾಜ್, ಅಲೆಕ್ಸ್ ಸಂತೋಷ್, ಸುಶಾಂತ್ ಮತ್ತು ನಿತಿನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ನಿಝಮ್ ಮತ್ತು ಮುರ್ಷಿದ್ ಇತರ ಸ್ನೇಹಿತರೊಂದಿಗೆ ದೀಪಕ್ ಬಾರ್ ಗೆ ಮದ್ಯ ಖರೀದಿಸಲು ಹೋಗಿದ್ದು ಈ ವೇಳೆ ಅಲ್ಲಿಗೆ ಬಂದ ನಾಲ್ವರು ಯುವಕರ ತಂಡ ಚೂರಿಯಿಂದ ಇರಿದಿದೆ. ನಿಝಾಮ್ ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು ಆತನನ್ನು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಸನ್ ಮುರ್ಷಿದ್ ಮುಕ್ಕದ ಶ್ರೀನಿವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳಕ್ಕೆ ಸುರತ್ಕಲ್ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.






