

ಸುರತ್ಕಲ್: ದೀಪಕ್ ಬಾರ್ ಬಳಿ ಗುರುವಾರ ರಾತ್ರಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಸಂಘ ಪರಿವಾರದ ಕಾರ್ಯಕರ್ತ ಗುರುರಾಜ್, ಆತನ ಸ್ನೇಹಿತರಾದ ಅಲೆಕ್ಸ್ ಸಂತೋಷ್, ಸುಶಾಂತ್ ಮತ್ತು ನಿತಿನ್ ದುಷ್ಕೃತ್ಯ ಎಸಗಿದ ಆರೋಪಿಗಳೆಂದು ತಿಳಿದು ಬಂದಿದೆ.
ಪ್ರಕರಣದ ತನಿಖೆ ಆರಂಭಿಸಿದ ಸುರತ್ಕಲ್ ಪೊಲೀಸ್ ನಿರೀಕ್ಷ ಪ್ರಮೋದ್ ಕುಮಾರ್ ನೇತೃತ್ವದ ಪೊಲೀಸ್ ತಂಡ, ಘಟನೆ ನಡೆಯುವ ಸಂದರ್ಭ ಸ್ಥಳದಲ್ಲಿದ್ದ ಸಂತ್ರಸ್ತರ ಸ್ನೇಹಿತನೊಬ್ಬನ ಜೊತೆ ಸ್ಥಳಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು. ಈ ವೇಳೆ ದೀಪಕ್ ಬಾರ್ ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸ್ ತಂಡ ಆರೋಪಿಗಳ ಗುರುತು ಪತ್ತೆಹಚ್ಚಿದೆ. ತಕ್ಷಣ ಪೊಲೀಸರ ಒಂದು ತಂಡ ಪ್ರಮುಖ ಆರೋಪಿ ಗುರುರಾಜ್ ನ ಹಡಗು ತಾಣಕ್ಕೆ ದಾಳಿ ಮಾಡಿದ್ದು, ಅಷ್ಟರಲ್ಲಾಗಲೇ ಆರೋಪಿಗಳು ಪರಾರಿಯಾಗಿದ್ದರು ಎಂದು ತಿಳಿದು ಬಂದಿದೆ.
ಸಂತ್ರಸ್ತರಾದ ನಿಝಾಮ್ ಮತ್ತು ಮುಕ್ಸಿದ್ ಮತ್ತು ಅವರ ಮೂವರು ಸ್ನೇಹಿತರು ಕಾನದ ದೀಪಕ್ ಬಾರ್ ನಲ್ಲಿದ್ದ ಸಂದರ್ಭ ಆರೋಪಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತೆನ್ನಲಾಗಿದೆ. ಇದು ಮುಂದುವರಿದು ಬಾರ್ ನಿಂದ ಹೊರಗಡೆಯೂ ಮಾತಿಗೆ ಮಾತು ಬೆಳೆದು ನಿಝಾಮ್ ಗೆ ಆರೋಪಿಗಳ ಪೈಕಿ ಗುರುರಾಜ್ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಈ ವೇಳೆ ತಡೆಯಲು ಮುಂದಾದ ಮುಕ್ಸಿದ್ ಕೈಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ..






