

ಸುರತ್ಕಲ್: ಯುವಕರಿಬ್ಬರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸುರತ್ಕಲ್ ಕಟ್ಲ ನಿವಾಸಿಗಳಾದ ಸುಶಾಂತ್ ಯಾನೆ ಕಡವಿ (29), ಕೆ.ವಿ. ಅಲೆಕ್ಸ್ (27), ಸುರತ್ಕಲ್ ಇಂದಿರಾ ಕಟ್ಟೆ ನಿವಾಸಿ ನಿತಿನ್ (26) ಮತ್ತು ಆರೋಪಿಗಳಿಗೆ ಆಶ್ರಯ ನೀಡಿದ ಕುಳಾಯಿ ಹೊನ್ನಕಟ್ಟೆ ನಿವಾಸಿ ಅರುಣ್ ಶೆಟ್ಟಿ (56) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಗುರುರಾಜ್ ಮತ್ತು ಆರೋಪಿ ಗಳಿಗೆ ಆಶ್ರಯ ನೀಡಿದ್ದ ಅಶೋಕ್ ಎಂಬವರು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಬಂಧನಕ್ಕಾಗಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕಾಗಿ ಸುರತ್ಕಲ್ ಬಳಿಯ ದೀಪಕ್ ಬಾರ್ ಬಳಿ ಹಸನ್ ಮುಕ್ಷಿತ್ ಮತ್ತು ನಿಝಾಮ್ ಎಂಬವರಿಗೆ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗುರುರಾಜ್, ಅಲೆಕ್ಸ್ ಸಂತೋಷ್, ನಿತಿನ್ ಮತ್ತು ಸುಶಾಂತ್ ಸೇರಿಕೊಂಡು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.






