

ಪುತ್ತೂರು: ಪವಿತ್ರ ಕುರಾನ್ ಗ್ರಂಥವನ್ನು ಸಂಪೂರ್ಣವಾಗಿ ಕೈ ಬರಹದಲ್ಲಿ ಕಲಂನಿಂದ ಇಂಕ್ ಮೂಲಕ ಬರೆದು ವಿಶೇಷ ಸಾಧನೆ ಮಾಡಿದ ಕುಂಬ್ರ ಮರ್ಕಝ್ ಪದವಿ ವಿಭಾಗದ ವಿದ್ಯಾರ್ಥಿನಿ ಸಜ್ಞಾ ಇಸ್ಮಾಯಿಲ್ ಬೈತಡ್ಕ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ನೋಂದಾಯಿಸಿಕೊಂಡು ಐಬಿಆರ್ ಅಚೀವರ್ ಪ್ರಶಸ್ತಿ ಪಡೆದಿದ್ದಾರೆ.
604 ಪುಟಗಳಲ್ಲಿ 114 ಖಾಂಡಗಳನ್ನು ಒಳಗೊಂಡ ಪವಿತ್ರ ಕುರಾನ್ ಬರೆದು ಪೂರ್ಣಗೊಳಿಸಲು ಸಜ್ಞಾ ಸುಮಾರು 2416 ತಾಸು ಸಮಯ, 15 ಬಾಟಲಿ ಇಂಕ್, 152 ಚಾರ್ಟ್ ಪೇಪರ್ ಹಾಗೂ 102 ಇರೆಸರ್ಗಳನ್ನು ಬಳಸಿರುವುದು ವಿಶೇಷ. ಈ ಕೈ ಬರಹ ಕುರಾನ್‌ನ ಲೋಕಾರ್ಪಣೆ ಆಗಸ್ಟ್ ತಿಂಗಳಲ್ಲಿ ಕುಂಬ್ರ ಮರ್ಕಝ್ ಕ್ಯಾಂಪಸ್‌ನಲ್ಲಿ ಜರುಗಿತ್ತು.
ಮಷಿ ಅದ್ದಿ ಕಲಂ ಬಳಸಿ ಕುರಾನ್ ಕೈ ಬರಹದಲ್ಲಿ ಬರೆದ ಏಕೈಕ ವಿದ್ಯಾರ್ಥಿನಿಯಾಗಿ ಸಜ್ಜಾಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ಲಭಿಸಿದೆ. ಅವರ ಸಾಧನೆಗೆ ಏಷ್ಯನ್ ಬುಕ್ ಆಫ್ ರೆಕಾರ್ಡ್, ಲಿಮ್ಮಾ ಬುಕ್ ಆಫ್ ರೆಕಾರ್ಡ್ ಸೇರಿದಂತೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ದಾಖಲೆಗಾಗಿ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ.
ಈಡನ್ ಗ್ಲೋಬಲ್ ಸ್ಕೂಲ್ ಬೆಳಂದೂರು ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಬೈತಡ್ಕ ಮತ್ತು ಝಹ್ರಾ ಜಾಸ್ಮಿನ್ ದಂಪತಿಗಳ ಪುತ್ರಿಯಾದ ಸಜ್ಜಾ ಅವರ ಈ ಸಾಧನೆ ಅರಬ್ ರಾಷ್ಟ್ರಗಳಲ್ಲಿಗೂ ಪ್ರಸಿದ್ಧಿ ಪಡೆದಿದೆ.






