

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆಗೆ ಸಂಬಂಧಿಸಿ ರಾಜ್ಯ ಸರಕಾರ ರಾಜಧನ ಇಳಿಕೆ ಮಾಡಿರುವುದನ್ನು ಸಮರ್ಪಕವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುವವರು, ಉದ್ಯಮಿಗಳು, ಸಿವಿಲ್ ಗುತ್ತಿಗೆದಾರರ ಸಭೆ ನಡೆಸಿ ಸೂಕ್ತ ಕ್ರಮ ವಹಿಸ ಬೇಕೆಂದು ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ನೇತೃತ್ವದ ನಿಯೋಗ ಜಿಲ್ಲಾಧಿಕಾಯವರಿಗೆ ಮನವಿ ಸಲ್ಲಿಸಿದೆ.
ವೈಜ್ಞಾನಿಕವಾಗಿ ಕೆಂಪು ಕಲ್ಲಿನ ದರ ನಿಗದಿ ಮಾಡಲು ಸೂಕ್ತ ಪ್ರಮಾಣಿತ ಕಾರ್ಯಾಚರಣೆ ವಿಧಾನ- ಎಸ್‌ಒಪಿ ಅಳವಡಿಸುವಂತೆ ಮನವಿಯಲ್ಲಿ ವಿವರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ವ್ಯಾಪಕವಾಗಿ ಬಳಸುವ ಕೆಂಪು ಕಲ್ಲಿನ ದುಬಾರಿ ದರದ ಕುರಿತು ರಾಜ್ಯ ಸರಕಾರ ಗಣಿಗಾರಿಕೆ ಮೇಲೆ ವಿಧಿಸಿದ್ದ ರಾಜಧನವನ್ನು ಶೇ. 58.82ರಷ್ಟು ಇಳಿಕೆ ಮಾಡಿದೆ. ಆದರೆ ಕೆಂಪು ಕಲ್ಲಿನ ದರ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಇಳಿಕೆಯಾಗಿಲ್ಲ. ಈ ಹಿಂದೆ 30 ರೂಪಾಯಿಗೆ ಸಿಗುತ್ತಿದ್ದ ಕಲ್ಲಿನ ದರ ರಾಜಸ್ವ ಹೆಸರಿನಲ್ಲಿ 50 ರಿಂದ 55 ರೂಪಾಯಿ ವಸೂಲು ಮಾಡುತ್ತಿದ್ದಾರೆ. ಇದರಿಂದ ಬಡ, ಮಧ್ಯಮ ವರ್ಗಗಳವರಿಗೆ ಮನೆ ಕಟ್ಟಲು ತೊಂದರೆಯಾಗಿದೆ. ಈ ಬಗ್ಗೆ ಸಾರ್ವಜನಿಕರು, ಜನಪ್ರತಿನಿಧಿಗಳಿಂದ ಸಾಕಷ್ಟು ದೂರುಗಳು ಬಂದಿವೆ. ಕೂಡಲೇ ಸಭೆ ನಡೆಸಿ ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಇದನ್ನೂ ಓದಿ: ನೇ*ಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡ 9ನೇ ತರಗತಿ ವಿದ್ಯಾರ್ಥಿ ಮನವಿ ಸಲ್ಲಿಸಿದ ನಿಯೋಗದಲ್ಲಿ ಮುಖಂಡರಾದ ಆರ್. ಪದ್ಮರಾಜ್ ಪೂಜಾರಿ, ರಾಜಪೂಜಾರಿ, ಕಿರಣ್ ಬಡ್ಲೆಗುತ್ತು ಮೊದಲಾದವರು ಇದ್ದರು.






