

ಕರಾವಳಿಯ ಕಾಂಗ್ರೆಸ್ ರಾಜಕಾರಣದಲ್ಲಿ ಭಾರೀ ಬದಲಾವಣೆಯ ಗಾಳಿ ಬೀಸುವ ಮುನ್ಸೂಚನೆ ಸಿಕ್ಕಿದೆ. ಹಿಂದುತ್ವದ ತವರು ನೆಲದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಮಾಸ್ಟರ್ ಪ್ಲ್ಯಾನ್ ಈಗಿಂದಲೇ ಸಿದ್ಧಗೊಂಡಂತಿದೆ. ಖುದ್ದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅಖಾಡಕ್ಕೆ ಇಳಿದಿರುವ ಲಕ್ಷಣ ಗೋಚರಿಸುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ಡಿಕೆಶಿ ಮುಖ್ಯಮಂತ್ರಿಯಾಗಲು ರಣತಂತ್ರಕ್ಕೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ನಂತರ ಮುಖ್ಯಮಂತ್ರಿ ಗಾದಿಗೇರಲು ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂ ಬಿ ಪಾಟೀಲ್ ಹೀಗೆ ಡಜನ್ ಗಟ್ಟಲೆ ನಾಯಕರು ಕ್ಯೂನಲ್ಲಿ ನಿಂತಿದ್ದಾರೆ. ಕಾಂಗ್ರೆಸ್ಸಿನಲ್ಲಿ ಸಿಎಂ ಗಾದಿಗೇರಬೇಕಾದರೆ ಶಾಸಕರ ಸಂಖ್ಯೆ ಅಷ್ಟೇ ಮುಖ್ಯ. ಡಿಕೆಶಿಗೆ ಸಿಎಂ ಗಾದಿ ತಪ್ಪಿದ್ದು ಬೆಂಬಲಿತ ಶಾಸಕರ ಕೊರತೆಯಿಂದ. ಮುಂದಿನ ಬಾರಿ ಹೀಗೆ ಆಗದಿರಲು ಭಾರೀ ರಣತಂತ್ರಕ್ಕೆ ಕೈ ಹಾಕಿದ್ದಾರೆ. ಅದರ ಭಾಗವಾಗಿ ಕರಾವಳಿಯಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿದೆ.
ಕರಾವಳಿ ಭಾಗದಲ್ಲಿ ಡಿಕೆಶಿ ಟೀಂ ಭಾರೀ ಸ್ಟ್ರಾಂಗ್ ಆಗಿದೆ. ಪುತ್ತೂರು ಶಾಸಕ ಅಶೋಕ್ ರೈ, ಯುವ ನಾಯಕ ಮಿಥುನ್ ರೈ, ಇನಾಯತ್ ಅಲಿ ಡಿಕೆಶಿ ಗರಡಿಯಲ್ಲಿ ಪಳಗಿದ ನಾಯಕರು. ಇದೀಗ ಮೂಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಹಾರಿದ್ದ ಜೈನ ಸಮುದಾಯದ ಪ್ರಭಾವೀ ನಾಯಕ ಜಗದೀಶ್ ಅಧಿಕಾರಿಯನ್ನು ಮತ್ತೆ ಕಾಂಗ್ರೆಸ್ ಪಡಸಾಲೆಗೆ ಕರೆತರುವ ಪ್ರಯತ್ನ ಭರ್ಜರಿಯಾಗಿ ನಡೆಯುತ್ತಿದೆ. ಕರಾವಳಿ ಭಾಗದಲ್ಲಿ ಬಿಜೆಪಿಯ ಬಹುದೊಡ್ಡ ಫೈನಾನ್ಸಿಯಲ್ ಎಂದೇ ಗುರುತಿಸಿಕೊಂಡಿರುವ ಗೋಲ್ಡ್ ಫಿಂಚ್ ಪ್ರಕಾಶ್ ಶೆಟ್ಟಿ ಕಾಂಗ್ರೆಸ್ ತೆಕ್ಕೆಗೆ ಬರುವ ಪ್ರಯತ್ನಗಳು ನಡೆಯುತ್ತಿದೆ. ಪುತ್ತೂರು ಶಾಸಕ ಅಶೋಕ್ ರೈ ಮಿಡ್ಲ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ನಡುವೆಯೇ ರಾಜಕೀಯದಲ್ಲಿ ಬಿಗ್ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಕರಾವಳಿಯ ಬಹುದೊಡ್ಡ ಉದ್ಯಮಪತಿ, ಜೆಡಿಎಸ್ ಮುಖಂಡ ಬಿ.ಎಂ ಫಾರೂಕ್ ಕಾಂಗ್ರೆಸ್ ಸೇರುವಂತೆ ಡಿಕೆಶಿ ಬಹಿರಂಗವಾಗಿ ಆಹ್ವಾನ ನೀಡಿದ್ದಾರೆ. ಮಂಗಳೂರು ಉತ್ತರದಲ್ಲಿ ಕೊನೆಕ್ಷಣದಲ್ಲಿ ಟಿಕೆಟ್ ವಂಚಿತರಾಗಿ ಜೆಡಿಎಸ್ ಪಡಸಾಲೆಗೆ ಹಾರಿದ್ದ ಮೊಹಿದ್ದೀನ್ ಬಾವಾ ಕೂಡಾ ಕಾಂಗ್ರೆಸ್ ಕದ ತಟ್ಟಲು ತಯಾರಾಗಿದ್ದಾರೆ. ಬಾವ ಕಾಂಗ್ರೆಸ್ ಸೇರ್ಪಡೆಗೆ ಅಡ್ಡಿಯಾಗಿದ್ದ ಡಿಕೆಶಿಯೇ ಖುದ್ದು ಆಹ್ವಾನ ನೀಡಿರುವುದು ಕಾಂಗ್ರೆಸ್ ಸೇರ್ಪಡೆಗೆ ಕ್ಷಣಗಣನೆ ಆರಂಭವಾಗಿದೆ ಅನ್ನುವ ವಿಶ್ಲೇಷಣೆಗಳು ಕೇಳಿ ಬರತೊಡಗಿದೆ.
ಜಗದೀಶ್ ಅಧಿಕಾರಿ ಕಾಂಗ್ರೆಸ್ಸಿನತ್ತ!
ಮೂಡಬಿದ್ರೆಯ ಕಾಂಗ್ರೆಸ್ ಪಕ್ಷದ ಹಳೇ ಹುಲಿ ಎಂದು ಕರೆಯಿಸಿಕೊಂಡಿರುವ ಜಗದೀಶ್ ಅಧಿಕಾರಿ ಮತ್ತೆ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡುತ್ತಾರೋ ಅನ್ನುವ ಕುತೂಹಲ ಗರಿಗೆದರಿದೆ. ಇದು ಸದ್ಯ ಮೂಡಬಿದ್ರೆ ಕಾಂಗ್ರೆಸ್ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ತನ್ನ ಮಿತ್ರ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ದಿಢೀರಾಗಿ ಜಗದೀಶ್ ಅಧಿಕಾರಿಯವರು ಭೇಟಿಯಾಗಿದ್ದು ಚರ್ಚೆಗೆ ಕಾರಣವಾಗಿದೆ. ಮೂಡಬಿದಿರೆಯಲ್ಲಿ ಕಾಂಗ್ರೆಸನ್ನು ಕಟ್ಟಿ ಬೆಳೆಸಿದವರೇ ಅಧಿಕಾರಿ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕೊನೆಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿತೆಂಬ ಅಸಮಾಧಾನದಲ್ಲಿ ಬಿಜೆಪಿ ಸೇರಿದ್ದರು. ಬಿಜೆಪಿ ಸೇರಿದ ಆರಂಭದಲ್ಲೇ ಟಿಕೆಟ್ ಪಡೆದು ಸ್ಪರ್ಧಿಸಿ ಸೋತರೂ ತೃತೀಯ ಸ್ಥಾನಕ್ಕೆ ತೃಪ್ತಿಪಡುತ್ತಿದ್ದ ಬಿಜೆಪಿಯನ್ನು ದ್ವಿತೀಯ ಸ್ಥಾನಕ್ಕೆ ತಂದು ನಿಲ್ಲಿಸಿದ ಹೆಗ್ಗಳಿಕೆ ಅವರದ್ದು.ಇದೀಗ ಮತ್ತೆ ಕಾಂಗ್ರೆಸ್ ನತ್ತ ಅವರ ಚಿತ್ತ ಇದೆ ಎಂದು ಹೇಳಲಾಗುತ್ತಿದೆ.ಡಿ.ಕೆ.ಶಿ ಅವರನ್ನು ಭೇಟಿಯಾಗುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರು ಕೂಡಾ ಉಪಸ್ಥಿತರಿದ್ದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೂಡಬಿದಿರೆ ಕ್ಷೇತ್ರದಲ್ಲಿ ಬಿಲ್ಲವ ಅಥವಾ ಜೈನ ಸಮುದಾಯಕ್ಕೆ ಟಿಕೆಟ್ ಫಿಕ್ಸ್ ಆಗುತ್ತೆ ಅನ್ನುವ ಸುದ್ದಿಯಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರತಿಭಾ ಕುಳಾಯಿ ಟಿಕೆಟ್ ಗಾಗಿ ಅರ್ಜಿ ಹಾಕಿದ್ದರು. ಜಗದೀಶ್ ಅಧಿಕಾರಿ ನಡೆ ಇದೀಗ ತೀವ್ರ ಕುತೂಹಲ ಸೃಷ್ಟಿಸಿದೆ.
ಬಾವಾ ಬ್ರದರ್ಸ್ ಕಾಂಗ್ರೆಸ್ ನತ್ತ.!
ಕರಾವಳಿಯ ಕಾಂಗ್ರೆಸ್ ನಲ್ಲಿ ಮತ್ತೊಂದು ರಾಜಕೀಯ ಸೆನ್ಸೇಷನಲ್ ಸುದ್ದಿಯೊಂದು ಹೊರಬಿದ್ದಿದೆ. ಜೆಡಿಎಸ್ ಮುಖಂಡ, ಉದ್ಯಮಿ ಬಿ.ಎಂ ಫಾರೂಕ್ ಕಾಂಗ್ರೆಸ್ ಸೇರುತ್ತಾರೆ ಅನ್ನುವ ಸುದ್ದಿ ಕೇಳಿ ಬರುತ್ತಿದೆ. ಜೊತೆಗೆ ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಹಾರಿದ್ದ ಮಾಜಿ ಶಾಸಕ ಮೊಹಿದ್ದೀನ್ ಬಾವಾ ಕಾಂಗ್ರೆಸ್ ಸೇರಲಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ. ಕೆಲ ದಿನಗಳ ಹಿಂದೆ ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖುದ್ದಾಗಿ ಬಹಿರಂಗ ವೇದಿಕೆಯಲ್ಲೇ ಕಾಂಗ್ರೆಸ್ ಸೇರ್ಪಡೆಗೆ ಆಹ್ವಾನ ನೀಡಿದ್ದರು. ಇದೀಗ ಇದು ದೊಡ್ಡ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ಬಿ.ಎಂ ಫಾರೂಕ್ ಜೆಡಿಎಸ್ ಪಕ್ಷದಲ್ಲಿ ಮುಂಚೂಣಿ ನಾಯಕರಾಗಿದ್ದರು. ದೇವೆಗೌಡ ಕುಟುಂಬದ ಜೊತೆ ಅತ್ಯಂತ ಆಪ್ತರಾಗಿ ಗುರುತಿಸಿಕೊಂಡಿದ್ದರು. ಜೆಡಿಎಸ್ ನಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ನಂತರ ಬಿ.ಎಂ ಫಾರೂಕ್ ಜೆಡಿಎಸ್ ನೊಂದಿಗೆ ಅತ್ಯಂತ ಹೆಚ್ಚಾಗಿ ಕಾಣಿಸುತ್ತಿರಲಿಲ್ಲ. ಡಿಕೆಶಿ ನಡುವಿನ ಉದ್ಯಮ ವೈಷಮ್ಯ ಫಾರೂಕ್ ಸಹೋದರ ಮೊಹಿದ್ದೀನ್ ಬಾವಾ ರವರ ಟಿಕೆಟ್ ತಪ್ಪುವಂತೆ ಮಾಡಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊನೆಹಂತದವರೆಗೂ ಮೊಹಿದ್ದೀನ್ ಬಾವಾ ರವರಿಗೆ ಕಾಂಗ್ರೆಸ್ ಟಿಕೆಟ್ ಫಿಕ್ಸ್ ಆಗಿತ್ತು. ಫಾರೂಕ್ ಮೇಲೆ ಡಿಕೆಶಿ ಗಿದ್ದ ವೈಷಮ್ಯ ಮೊಹಿದ್ದೀನ್ ಬಾವಾ ರವರ ಟಿಕೆಟ್ ತಪ್ಪಲು ಕಾರಣವಾಗಿತ್ತು. ಖುದ್ದು ಡಿಕೆಶಿಯೇ ತನ್ನ ಪರಮಾಪ್ತ ಶಿಷ್ಯ ಇನಾಯತ್ ಆಲಿಯವರನ್ನು ಅಖಾಡಕ್ಕೆ ಇಳಿಸಿದ್ದರು. ಇದೀಗ ಖುದ್ದು ಡಿಕೆಶಿಯೇ ಬಾವಾ ಬ್ರದರ್ಸ್ ಗೆ ಕಾಂಗ್ರೆಸ್ ಗೆ ಆಹ್ವಾನ ನೀಡಿರುವುದು ಇದರ ಹಿಂದೆ ಭಾರೀ ರಣತಂತ್ರ ಅಡಗಿದೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.






