November 24, 2025
WhatsApp Image 2025-11-10 at 4.38.18 PM

ಮಂಗಳೂರು: ಸಾವಿರಾರು ವರ್ಷಗಳ ಇತಿಹಾಸವುಳ್ಳ ಹಿಂದೂ ಧರ್ಮವನ್ನು, ನೂರು ವರ್ಷ ಕಳೆದಿರುವ ಆರೆಸ್ಸೆಸ್ ಜೊತೆ ತುಲನೆ ಮಾಡುವುದು ಖಂಡನೀಯ. ಇದೀಗ ದೇಶದಾದ್ಯಂತ ಚರ್ಚೆಯ ವಿಷಯವಾಗಿರುವ “ಆರೆಸ್ಸೆಸ್ ಏಕೆ ನೋಂದಣಿ ಆಗಿಲ್ಲ” ಎಂಬ ಪ್ರಶ್ನೆಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ “ಹಿಂದೂ ಧರ್ಮವೂ ನೋಂದಣಿ ಆಗಿಲ್ಲ” ಎಂದು ನೀಡಿರುವ ಹೇಳಿಕೆ ಖಂಡನೀಯ ಮತ್ತು ಅದು ನಾವೆಲ್ಲರೂ ಪ್ರತಿನಿಧಿಸುವ ಹಿಂದೂ ಧರ್ಮಕ್ಕೆ ಮಾಡುವ ಘೋರ ಅಪಮಾನವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರು ಮತ್ತು ವಿಧಾನಪರಿಷತ್ ಶಾಸಕರು ಆದ ಮಂಜುನಾಥ ಭಂಡಾರಿಯವರು ಹೇಳಿದ್ದಾರೆ.

ಈ ಹೇಳಿಕೆಯಿಂದ ಭಾಗವತ್ ಅವರು, ವಿವಿಧತೆಯಲ್ಲಿ ಏಕತೆಯನ್ನೇ ಮೂಲಮಂತ್ರ ವನ್ನಾಗಿಸಿಕೊಂಡಿರುವ ಹಿಂದೂ ಧರ್ಮವನ್ನು ಒಂದು ನೋಂದಾಯಿತ ಅಲ್ಲದ “ಸಂಸ್ಥೆ” ಅಥವಾ “ಸಂಘಟನೆ”ಗೆ ಹೋಲಿಕೆ ಮಾಡುವ ಮೂಲಕ ಅವಮಾನಿಸಿದ್ದಾರೆ. ಹಿಂದೂಧರ್ಮವು ಲಕ್ಷಾಂತರ ವರ್ಷಗಳಿಂದ ಈ ನೆಲದ ಮೂಲನಿವಾಸಿಗಳ ಜೀವನಶೈಲಿಯ, ಸಂಸ್ಕೃತಿಯ, ನಂಬಿಕೆಗಳ ಸಮಗ್ರ ರೂಪವಾಗಿದೆ. ನೂರಾರು ಪೀಳಿಗೆಗಳ ಅನುಭವ, ತತ್ತ್ವ, ಆಚರಣೆಗಳಿಂದ ಬೆಳೆದ ಈ ಧರ್ಮವು ಯಾರೊಬ್ಬರ “ನೋಂದಣಿಯ” ಅಗತ್ಯವಿಲ್ಲದೆ ಶಾಶ್ವತವಾಗಿ ನೆಲೆಯೂರಿದೆ
ಎಂದವರು ಹೇಳಿದರು.

ವಿಶ್ವಮಾನ್ಯವಾದ ಹಿಂದೂ ಧರ್ಮ ಮತ್ತು ಆರೆಸ್ಸೆಸ್ ಅನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಹಾಸ್ಯಾಸ್ಪದ ವಿಚಾರ. ಹಿಂದೂ ಧರ್ಮವನ್ನು ನಾವೆಲ್ಲರೂ ಆಚರಣೆ ಮಾಡುವವರು‌. ಆದರೆ ಆರೆಸ್ಸೆಸ್ ನ ತತ್ವ ಸಿದ್ದಾಂತವನ್ನು ಕೇವಲ ಒಂದು ಗುಂಪಿನ ಜನರು ಮಾತ್ರವೇ ಒಪ್ಪುತ್ತಾರೆ ಎಂದವರು ಹೇಳಿದ್ದಾರೆ.

ಹಾಗೆಯೇ ಆರೆಸ್ಸೆಸ್ ಗುಪ್ತ ಕಾರ್ಯಸೂಚಿ ಹೊಂದಿರುವ ಒಂದು ಖಾಸಗಿ ಸಂಘಟನೆ ಎಂಬುದು ಮೂರುಬಾರಿ ನಿಷೇಧಕ್ಕೊಳಗಾಗುವ ಮೂಲಕ ಸಾಭೀತಾಗಿದೆ. ಹಾಗೆಯೇ ಅದು ಪ್ರಜಾಪ್ರಭುತ್ವದ ಸಂವಿಧಾನಕ್ಕೆ ಬದ್ಧವಾಗಿರುವ ಯಾವುದೇ ಕಾನೂನುಬದ್ಧ ನೋಂದಣಿಯಿಲ್ಲದೆ ದೇಶದ ರಾಜಕೀಯ, ಆಡಳಿತ, ಶಿಕ್ಷಣ, ಧರ್ಮ ಸೇರಿದಂತೆ ಎಲ್ಲ ಕ್ಷೇತ್ರಗಳ ಮೇಲೆ ಕೆಟ್ಟ ಪ್ರಭಾವ ಬೀರುತ್ತಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

About The Author

Leave a Reply