November 24, 2025
WhatsApp Image 2025-11-13 at 3.36.33 PM

ಮಂಗಳೂರು: ಡ್ರಗ್ಸ್‌ ಪ್ರಕರಣಗಳಲ್ಲಿ ಮುಸ್ಲಿಮರೇ ಹೆಚ್ಚು ಸಿಲುಕಿರುವುದು ಆತಂಕಕಾರಿ ವಿಚಾರ. ಇಸ್ಲಾಂನಲ್ಲಿ ಮದ್ಯಮಾನಕ್ಕೆ ನಿಷೇಧವಿದ್ದು, ಅವರನ್ನು ಜಮಾಅತ್‌ನಿಂದ ಹೊರಗಿಡಲಾಗುತ್ತದೆ. ಹಾಗಾಗಿ ಮದ್ಯಪಾನ ಮಾಡಿದರೆ ವಾಸನೆ ಬರ್ತದೆ ಎಂದು ಡ್ರಗ್ಸ್‌ ಸೇವಿಸುವ ಚಟಕ್ಕೆ ಬೀಳುತ್ತಿದ್ದಾರೆ. ಆದರೆ ಇಸ್ಲಾಂನಲ್ಲಿ ಮದ್ಯ ಮಾತ್ರವಲ್ಲ ಡ್ರಗ್ಸ್‌ ಸಹಿತ ಎಲ್ಲಾ ಅಮಲು ಪದಾರ್ಥಗಳಿಗೂ ನಿಷೇಧವಿದೆ ಹೀಗಾಗಿ ಮುಸ್ಲಿಂ ಧರ್ಮಗುರುಗಳು ಈ ಬಗ್ಗೆ ಎಚ್ಚೆತ್ತುಕೊಂಡು ಸಮಾಜವನ್ನು ಡ್ರಗ್ಸ್‌ ಚಟದಿಂದ ಹೊರಗಡೆ ತರುವ ಕೆಲಸ ಅಗತ್ಯವಾಗಿ ಮಾಡಬೇಕಿದೆ ಎಂದು ದೂದ್‌ ನಾನಾ ಕಲ್ಚರಲ್‌ ಫೌಂಡೇಶನ್‌ ಹಾಗೂ ಅಲ್‌ ಸಲಾಮ ಕೌನ್ಸಿಲಿಂಗ್‌ ಸೆಂಟರ್‌ ಪ್ರಧಾನ ಕಾರ್ಯದರ್ಶಿ ಇಕ್ಬಾಲ್‌ ಬಾಳಿಲ ಹೇಳಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಕ ಜಿಲ್ಲೆಯಲ್ಲಿ ಡ್ರಗ್‌ ಕೇಸ್‌ನಲ್ಲಿ 10 ಮಂದಿ ಅರೆಸ್ಟ್‌ ಆದ್ರೆ ಅದರಲ್ಲಿ 8 ಮಂದಿ ಮುಸ್ಲಿಮರು, ಒಬ್ಬ ಹಿಂದೂ ಹಾಗೂ ಒಬ್ಬ ವಿದೇಶಿಗ ಇರುತ್ತಾನೆ ಎನ್ನುವುದು ಸಮೀಕ್ಷೆಯಲ್ಲಿ ನಮಗೆ ಸಿಕ್ಕ ಮಾಹಿತಿ. ದಕ ಜಿಲ್ಲೆಯ ಎರಡು ತಿಂಗಳ ಹಿಂದಿನ ವರದಿಯಲ್ಲಿ ನಮಗೆ ಸಿಕ್ಕ ಮಾಹಿತಿ ಪ್ರಕಾರ ಮಂಗಳೂರು ಕಮೀಷನರ್‌ ವ್ಯಾಪ್ತಿಯಲ್ಲೇ ನಾಲ್ಕು ವರ್ಷಗಳ 2000 ಕೇಸ್‌ಗಳಲ್ಲಿ 1600 ಮಂದಿ ಮುಸ್ಲಿಮರು ಇದ್ದರೆ 300 ಕೇಸ್‌ಗಳಷ್ಟು ಬೇರೆ ಬೇರೆ ಧರ್ಮದವರು ಇರುವುದನ್ನು ಕಂಡುಕೊಳ್ಳಲಾಗಿದೆ. ಜಿ.ಎ. ಬಾವಾ ಅವರು ಆರ್‌ಟಿಎ ಮೂಲಕ ಪಡೆದ ಮಾಹಿತಿಯ ಪ್ರಕಾರ ದಕ ಎಸ್‌ಪಿ ವ್ಯಾಪ್ತಿಯಲ್ಲಿ ಕೂಡ ಸುಮಾರು 1800 ಕೇಸ್‌ಗಳಲ್ಲಿ ಸುಮಾರು 1200 ಮಂದಿ ಮುಸ್ಲಿಮರೇ ಇರುವುದು ಪತ್ತೆಯಾಗಿರುವುದು ನಿಜಕ್ಕೂ ಆತಂಕಕಾರಿ ಎಂದರು. ಒಂದು ವಾರದ ಹಿಂದೆ ಒಬ್ಬ ಹುಡುಗನಿಂದ ಸಿಕ್ಕ ಮಾಹಿತಿ ಪ್ರಕಾರ, ಪೆಡ್ಲರ್‌ಗಳು ನಿನ್ನೆ ಓದಿದ್ದು ನಾಳೆ ನೆನಪಾಗುತ್ತೆ ಎಂದು ವಿದ್ಯಾರ್ಥಿಗಳಿಗೆ ಬ್ರೈನ್ ವಾಶ್‌ ಮಾಡಿ ಎನ್‌ಡಿಎಂಎ ಚಟ ಹತ್ತಿಸಿರುವ ಮಾಹಿತಿ ನೀಡಿದ್ದ. ಆದರೆ ಇದು ಸುಳ್ಳಾಗಿದ್ದು, ಹಾಗೆ ಆಗಲು ಸಾಧ್ಯವೇ ಇಲ್ಲ. ಕೆಲವರು ಎನ್‌ಡಿಎಂಎ ಅನ್ನು ಉಗುರಿನಲ್ಲಿ ಅಡಗಿಸಿಟ್ಟು, ಬೆರಳನ್ನು ನೀರಲ್ಲಿ ಅದ್ದಿ ಅದನ್ನು ಕುಡಿದು ನಶೆಯಲ್ಲಿ ತೇಲಾಡುತ್ತಿರುವುದನ್ನೂ ನಾವು ಕಂಡುಕೊಂಡಿದ್ದಾಗಿ ಅವರು ಹೇಳಿದರು. ಡ್ರಗ್ಸ್‌ ಜಾಗೃತಿಗಾಗಿ ಮಸೀದಿ ಪ್ರತಿನಿಧಿಗಳಿಗೆ ಜಾಗೃತಿ ಮೂಡಿಸುವ ಕೆಲಸ ನಡೆಸಲಾಗುತ್ತದೆ. ಇಮಾಮ್‌ಗಳಿಗೆ ತರಬೇತಿ ನೀಡಿ ಮಸೀದಿಗಳಲ್ಲಿ ಶುಕ್ರವಾರ ಡ್ರಗ್ಸ್‌ ಜಾಗೃತಿ ನೀಡಲಾಗುತ್ತಿದೆ. ಶಾಲಾ ಮಕ್ಕಳಿಗೂ ಜಾಗೃತಿ ಮೂಡಿಸುತ್ತೇವೆ. ದೇರ್ಲಕಟ್ಟೆಯಲ್ಲಿ ನಮ್ಮ ಕೌನ್ಸಿಲಿಂಗ್‌ ಸೆಂಟರ್‌ ಇದ್ದು, ಅಲ್ಲಿ ಹೆತ್ತವರು ನಾಲ್ಕೈದು ಮಕ್ಕಳನ್ನು ಕರ್ಕೊಂಡು ಬರುತ್ತಿದ್ದು, ಈ ಪೈಕಿ ಶೇ.60 ಮಕ್ಕಳು ಡ್ರಗ್ಸ್‌ ಮುಕ್ತರಾಗಿದ್ದಾರೆ. 20 ರಷ್ಟು ಮಕ್ಕಳು ಸಂಪೂರ್ಣ ನಶೆಮುಕ್ತರಾಗಿದ್ದಾರೆ. ಅವರ ಮೇಲೆ ಸುಮಾರು ಆರು ತಿಂಗಳ ಕಾಲ ಸಂಪೂರ್ಣ ನಿಗಾ ಇಟ್ಟು ಅವರನ್ನು ನಶೆಮುಕ್ತರನ್ನಾಗಿಸುವ ಕೆಲಸ ಮಾಡುತ್ತಿದ್ದೇವೆ ಎಂದರು. ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳು, ಮಾತ್ರವಲ್ಲ ಹೆಣ್ಮಕ್ಕಳು ಕೂಡ ಡ್ರಗ್ಸ್‌ ಚಟಕ್ಕೆ ಬೀಳುವುದು ಆಘಾತಕಾರಿಯಾಗಿದೆ. ಪಿಜಿಯಲ್ಲಿರುವ ಹೊರ ರಾಜ್ಯದ ಹೆಣ್ಮಕ್ಕಳು ಹೋಂ ಸಿಕ್‌ನೆಸ್‌, ಊಟ ಸರಿ ಇಲ್ಲ ಎಂದು ಪ್ರತ್ಯೇಕ ಪ್ಲಾಟ್‌ಗಳಲ್ಲಿ ವಾಸವಾಗುತ್ತಾರೆ. ಒಂಟಿತನದಿಂದ ಹೊರಬರಲು ಡ್ರಗ್ಸ್‌ ಚಟಕ್ಕೆ ಬಿದ್ದು, ತಮ್ಮ ಸರ್ಕಲ್‌ನವರಿಗೂ ಇದರ ಚಟ ಹತ್ತಿಸ್ತಾರೆ. ಕೆಲವರು ಕುತೂಹಲದಿಂದ ಸೇವಿಸಿ ಕೊನೆಗೆ ಅದನ್ನೇ ಚಟವನ್ನಾಗಿಸಿದವರೂ ಇದ್ದಾರೆ. ಮಕ್ಕಳು ಖಿನ್ನತೆಗೊಳಗಾದಾಗಲೂ ಇದರ ದಾಸರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಪೆಡ್ಲರ್‌ಗಳು ಜ್ಯೂಸ್‌ ಮೂಲಕ ಜನರಿಗೆ ಡ್ರಗ್ಸ್‌ ಚಟ ಹತ್ತಿಸಿರುವುದು ಕಂಡುಬಂದಿದೆ. ಮೊದಲು ಜ್ಯೂಸ್‌ನಲ್ಲಿ ಎಂಡಿಎಂಎ ಸೇರಿಸಿ ಅದನ್ನು ಕುಡಿಯಲು ಕೊಡುತ್ತಾರೆ. ಮರುದಿನ ಅಂಥದ್ದೇ ಬೇಕೆಂದು ಅನಿಸಿದಾಗ ಎಂಡಿಎಂಎಯ ಚಟ ಹತ್ತಿಸುವ ಕೆಲಸ ಪೆಡ್ಲರ್‌ಗಳಿಂದ ನಡೆಯುತ್ತಿದೆ ಇದನ್ನು ಮಟ್ಟ ಹಾಕಬೇಕಾಗಿದೆ ಎಂದರು. ಮದ್ಯಪಾನಿಗಳನ್ನು ಜಮಾಅತ್‌ನಿಂದ ಹೊರಗಿಡುವಂತೆ ಫತ್ವಾ ಹೊರಡಿಸಲಾಗುತ್ತಿದೆ. ಹಾಗಾಗಿ ಡ್ರಗ್ಸ್‌ ವ್ಯವನಿಗಳನ್ನೂ ಡ್ರಗ್ಸ್‌ ಜಮಾಅತ್‌ನಿಂದ ಹೊಡಗಿಡುವ ಬಗ್ಗೆ ಚಿಂತನೆ ನಡೆಯಬೇಕಿದೆ. ಮಕ್ಕಳು ಡ್ರಗ್ಸ್‌ ಮುಟ್ಟಲು ಭಯಪಡುವಂತಾಗಬೇಕು. ಮದ್ಯಮಾನ ಸೇವಿಸಿದರೆ ಘೋರ ನರಕವಿದೆ ಎಂದು ಎಂಬ ಭಯದಿಂದ ಮದ್ಯಪಾನ ಸೇವಿಸುವುದಿಲ್ಲ. ಆದರೆ ಡ್ರಗ್ಸ್‌ ಸೇವನೆಯ ಭಯಾನಕತೆಯ ಬಗ್ಗೆಯೂ ಅರಿವು ಮೂಡಿಸಬೇಕು. ಎಂಡಿಎಂಎ ಸೇವಿಸಿದವರು ಕೇವಲ 10 ವರ್ಷ ಮಾತ್ರ ಬದುಕುತ್ತಾರೆ ಎನ್ನುವುದನ್ನು ಕಂಡುಕೊಳ್ಳಲಾಗಿದೆ. ಹೀಗಾಗಿ ಧರ್ಮಗುರುಗಳೂ ಕೂಡ ಈ ಬಗ್ಗೆ ಮಾಹಿತಿ ಪಡೆದು ಡ್ರಗ್ಸ್‌ ಭಯಾನಕತೆಯ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಮಾಡಿಸಬೇಕು ಎಂದರು.

ನವೆಂಬರ್ 15ರಂದು ‘ಎಂಪವರ್ ದ ಫ್ಯೂಚರ್’ ದಕ್ಷಿಣ ಕನ್ನಡದಲ್ಲಿ ಯುವಜನತೆಗೆ ನಶೆಮುಕ್ತಿ ಸಂದೇಶ ನೀಡುವ ಉದ್ದೇಶದಿಂದ ‘ಎಂಪವರ್ ದ ಫ್ಯೂಚರ್’ ಎಂಬ ಜಾಗೃತಿ ಕಾರ್ಯಕ್ರಮ ನವೆಂಬರ್ 15ರಂದು ಮಂಗಳೂರು ಪುರಭವನದಲ್ಲಿ ನಡೆಯಲಿದೆ ಎಂದು ಸಂಚಾಲಕ ಶೈಖ್ ಮುಹಮ್ಮದ್ ಇರ್ಫಾನಿ ಇದೇ ಸಂದರ್ಭದಲ್ಲಿ ಹೇಳಿದರು. ಈ ಕಾರ್ಯಕ್ರಮವನ್ನು ದೂದ್ ನಾನಾ ಕಲ್ಬರಲ್ ಫೌಂಡೇಶನ್ ಮತ್ತು ಅಲ್ ಸಲಾಮ ಕೌನ್ಸಿಲಿಂಗ್ ಸೆಂಟರ್ ಸಂಯುಕ್ತವಾಗಿ ಆಯೋಜಿಸಿದ್ದು, ಅಂತರಾಷ್ಟ್ರೀಯ ವಾಗ್ಮಿ ಸಿಂಸಾರುಲ್ ಹಖ್ ಹುದವಿ ಮುಖ್ಯ ಪ್ರಭಾಷಣ ನೀಡಲಿದ್ದಾರೆ. ಮಂಗಳೂರು ಪೊಲೀಸ್‌ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಕಾನೂನು ಸಲಹೆ ನೀಡಲಿದ್ದು, ಶರೀಫ್ ಹಾಜಿ (ವೈಟ್ ಸ್ಟೋನ್) ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಬಿ.ಕೆ. ಅಬ್ದುಲ್ ಖಾದರ್ ಮುಸ್ಲಿಯಾರ್ (ಬಂಬ್ರಾಣ) ಮತ್ತು ಉದ್ಯಮಿ ಮುಸ್ತಫಾ ಭಾರತ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ. ಯು.ಟಿ. ಖಾದರ್, ಝಕರಿಯಾ ಜೋಕಟ್ಟೆ ಮತ್ತು ಝನುಲ್ ಆಬಿದ್ ಅವರನ್ನು ವಿಶೇಷವಾಗಿ ಗೌರವಿಸಲಾಗುವುದು. ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಪ್ರಾಜೆಕ್ಟ್‌ ಅನಾವರಣಗೊಳಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ನಡೆಯುವ ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಮಸೀದಿ ಆಡಳಿತ ಸಮಿತಿ ಸದಸ್ಯರು, ಉಲಮಾಗಳು ಹಾಗೂ ಯುವ ವಿದ್ಯಾರ್ಥಿಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯಧ್ಯಕ್ಷ ಹಾಜಿ ಬಿ ಎಂ ಶರೀಫ್ ವೈಟ್ ಸ್ಟೋನ್, ಸಂಚಾಲಕರು. ಕೋಶಾಧಿಕಾರಿ ಫಕೀರಬ್ಬ ಮಾಸ್ಟರ್, ದೂದ್ ನಾನಾ ಫೌಂಡೇಶನ್ ಅಧ್ಯಕ್ಷ ಝನುಲ್ ಆಬಿದ್ ಬಿ. ಕೆ., ಮೊಹಮ್ಮದ್ ಕುಂಞಿ ಮಾಸ್ಟರ್ ಉಪಸ್ಥಿತರಿದ್ದರು.

About The Author

Leave a Reply