November 28, 2025
WhatsApp Image 2025-11-25 at 9.22.33 AM

ಮಂಗಳೂರು: ಮಂಗಳೂರಿನಲ್ಲಿ  ಆಗುವ ಸಣ್ಣ ಪುಟ್ಟ ಅಪರಾಧ ಕೃತ್ಯಗಳನ್ನು ಕೂಡ ಪೊಲೀಸರು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಇದಕ್ಕೆ ಕಾರಣವೆಂದರೆ, ಇಲ್ಲಿ ನಡೆಯುವ ಘಟನೆಗಳಿಂದ ಶಾಂತಿ ಭಂಗ ಆಗುವ ಎಲ್ಲಾ ಸಾದ್ಯತೆಗಳು ಹೆಚ್ಚಿರುತ್ತವೆ. ಕಳೆದ ಐದಾರು ತಿಂಗಳಿಂದ ಕರಾವಳಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಶಾಂತಿ ನೆಲೆಸಿತ್ತು. ಈ ನಡುವೆ ಮತ್ತೊಂದು ದಾಳಿ ಆತಂಕ ಉಂಟು ಮಾಡಿದೆ. ಸೋಮವಾರ ಸಂಜೆ ಮಂಗಳೂರು ಹೊರವಲಯದ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಖಿಲೇಶ್ ಎಂಬ ಯುವಕನ ಮೇಲೆ ನಾಲ್ಕು ಜನರ ತಂಡವೊಂದು ತಲ್ವಾರ್​​ನಿಂದ ದಾಳಿ ಮಾಡಿದೆ. ಬೈಕ್​ನಲ್ಲಿ ಬಂದ ತಂಡ ದಾಳಿ ಮಾಡಿದ್ದು ತಲ್ವಾರ್​​ನಿಂದ ಮೊಣಕೈಗೆ ಗಾಯಗೊಳಿಸಿದೆ. ಗಾಯಾಳು ಅಖಿಲೇಶ್​ಗೆ ಮೂಡಬಿದಿರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಒಬ್ಬ ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

ಒಟ್ಟು ನಾಲ್ಕು ಜನ ದುಷ್ಕರ್ಮಿಗಳು ಘಟನೆ ಬಳಿಕ ಪರಾರಿಯಾಗಲು ಯತ್ನಿಸಿದ್ದಾರೆ. ಮೂವರು ಒಂದೇ ಬೈಕ್​ನಲ್ಲಿ ಪರಾರಿಯಾಗಿದ್ದಾರೆ. ಮತ್ತೋರ್ವ ಆರೋಪಿ ಸಿನಾನ್ ಪರಾರಿಯಾಗಲು ಯತ್ನಿಸಿದ್ದಾನೆ. ಸಿಕ್ಕ ಸಿಕ್ಕ ವಾಹನಗಳನ್ನು ಬಲವಂತವಾಗಿ ಅಡ್ಡಹಾಕಿದ್ದಾನೆ. ಆದರೆ ಯಾರು ಕೂಡ ನಿಲ್ಲಿಸಿಲ್ಲ. ಓರ್ವ ಬೈಕ್ ಸವಾರ ಈತನ ಪುಂಡಾಟದಿಂದ ಗಾಬರಿಯಾಗಿ ಬೈಕ್​ನಿಂದ ಬಿದ್ದಿದ್ದಾನೆ. ಇನ್ನು ಸಿನಾನ್​ನನ್ನು ಸ್ಥಳೀಯರು ಹಿಡಿದು ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಂಗಳೂರು ತಲ್ವಾರ್ ದಾಳಿ ಬಗ್ಗೆ ಪೊಲೀಸರು ಹೇಳಿದ್ದೇನು?

ನಾಲ್ವರು ಒಂದೇ ಬೈಕ್​ನಲ್ಲಿ ಚಾಕು ಹಿಡಿದು ಹೋಗುತ್ತಿದ್ದರು. ಅದನ್ನು ನೋಡಿದ ಅಖಿಲೇಶ್ ಅವರ ಫೋಟೊ ತೆಗೆಗಿದ್ದಾರೆ. ಆ ಕಾರಣ ಅವರು ಈತನ ಮೇಲೆ ದಾಳಿ ಮಾಡಿದ್ದಾರೆ. ಅಖಿಲೇಶ್​​​ಗೆ ಸಣ್ಣಪುಟ್ಟ ಗಾಯವಾಗಿದೆ. ನಾಲ್ವರು ಬಾರ್​ನಿಂದ ಕುಡಿದು ಬರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಕುಡಿದ ಮತ್ತಿನಲ್ಲಿ ಆಗಿರುವ ಗಲಾಟೆಯೇ ಅಥವಾ ಬೇರೆ ಏನಾದರೂ ಕಾರಣ ಇದೆಯೇ ಎಂಬ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಬಜ್ಪೆ ಮತ್ತು ಮೂಡಬಿದಿರೆ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಉಳಿದ ಮೂವರು ಯಾರು ಎಂಬುದು ಕೂಡ ಗೊತ್ತಾಗಿದೆ. ಆರೋಪಿಗಳ ಬಂಧನದ ಬಳಿಕವೇ ಈ ಕೃತ್ಯಕ್ಕೆ ಕಾರಣ ಏನು ಎಂಬುದು ಗೊತ್ತಾಗಲಿದೆ.

About The Author

Leave a Reply