

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿರುವ ಲತಾ ಎಂಬುವರ ಬ್ಯಾಗ್ ನಲ್ಲಿ ಇರಿಸಿದ್ದ 6,79,000 ರೂಪಾಯಿ ಮೌಲ್ಯದ 97ಗ್ರಾಂ ಚಿನ್ನಾಭರಣವನ್ನು ಕಳವು ಮಾಡಿರುವ ಬಗ್ಗೆ ಮೇ. 3ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ. ಕ್ರ 17/2025 ರಂತೆ ಪ್ರಕರಣ ದಾಖಲಾಗಿ ಧರ್ಮಸ್ಥಳ ಪೊಲೀಸರು ಆರೋಪಿಗಳ ಪತ್ತೆಕಾರ್ಯದಲ್ಲಿದ್ದರು.
ನವೆಂಬರ್ 23ರಂದು ಮತ್ತೆ ಧರ್ಮಸ್ಥಳದತ್ತ ಕಳ್ಳತನ ಮಾಡಲು ಆರೋಪಿಗಳು ಬರುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳದ ದ್ವಾರದ ಬಳಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾದ ಹುಬ್ಬಳ್ಳಿ ನಗರದ ಸಟಲ್ಮೆಂಟ್ ನಿವಾಸಿ ಬಿ.ಬಿ.ಜಾನ್(59) ಮತ್ತು ಆಕೆಯ ಮಗಳು ಆರತಿ ಯಾನೆ ಮಸಾಬಿ ಯಾನೆ ಅಸ್ಮಾ (34) ಎಂಬವರನ್ನು ಬಂಧಿಸಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಮುಂದಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದು, ವಿಚಾರಣೆ ನಡೆಸಿ, ಕಳ್ಳತನ ಮಾಡಿದ ಸುಮಾರು 5,32,000 ಸಾವಿರ ಮೌಲ್ಯದ 76 ಗ್ರಾಂ ಚಿನ್ನಾಭರಣಗಳನ್ನು ಧರ್ಮಸ್ಥಳ ಪೊಲೀಸರು ಹುಬ್ಬಳಿಯಲ್ಲಿರುವ ಆರೋಪಿಗಳ ಮನೆಯಿಂದ ವಶ ಪಡಿಸಿಕೊಂಡಿರುತ್ತಾರೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಬೆಳ್ತಂಗಡಿ ಉಪ-ವಿಭಾಗ ಡಿವೈಎಸ್ಪಿ ರೋಹಿನಿ ಸಿ.ಕೆ ಅವರ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ವೃತ ನಿರೀಕ್ಷಕ ಬಿ. ಜಿ ಸುಬ್ಬಪುರ್ ಮಠ್, ಧರ್ಮಸ್ಥಳ ಪೊಲೀಸ್ ಉಪ-ನಿರೀಕ್ಷಕರಾದ ಸಮರ್ಥ್ ಆರ್ ಗಾಣಿಗೇರ, ಸಿಬ್ಬಂದಿಗಳಾದ ರಾಜೇಶ್, ಪ್ರಶಾಂತ್, ಸಂದೀಪ್, ಮಲ್ಲಿಕಾರ್ಜುನ್, ಶಶಿಕುಮಾರ್, ಮಂಜುನಾಥ್ ಪಾಟೀಲ್, ಪ್ರಮೋದಿನಿ, ಸುನಿತಾ, ಸೌಭಾಗ್ಯ, ದೀಪಾ, ಉಷಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.






