

ನನ್ನ ಗಡಿಪಾರಿಗೆ ಪುತ್ತೂರು ಶಾಸಕರ ಒತ್ತಡವಿದೆ ಎಂದು ಪುತ್ತೂರಿನ ಸಾಮಾಜಿಕ ಕಾರ್ಯಕರ್ತ ಹಕೀಂ ಕೂರ್ನಡ್ಕ ಆರೋಪಿಸಿದ್ದಾರೆ.
ಪುತ್ತೂರಿನಲ್ಲಿ ಅವರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಆರು ತಿಂಗಳ ಹಿಂದೆ ಪುತ್ತೂರು ಸಹಾಯಕ ಆಯುಕ್ತರ ಕಛೇರಿಯಿಂದ ನಿಮ್ಮನ್ನು ಗಡಿಪಾರು ಯಾಕೆ ಮಾಡಬಾರದು ಎನ್ನುವುದಕ್ಕೆ ಸೂಕ್ತ ದಾಖಲೆ ಸಲ್ಲಿಸಲು ತಿಳಿಸಲಾಗಿತ್ತು.
ಅದೇ ರೀತಿ ನನ್ನ ಮೇಲೆ ಒಂಬತ್ತು ಕೇಸುಗಳಿಲ್ಲ, ಶಾಸಕರೇ ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿರುವುದೇ ನನ್ನ ಮೇಲಿರುವ ಪ್ರಕರಣ. ಆ ಕೇಸಿಗೂ ಕೂಡಾ ಪೋಲೀಸರು ಬಿ ರಿಪೋರ್ಟ್ ಹಾಕಿದ್ದಾರೆ. ಆ ಬಳಿಕವೂ ನಿರಂತರವಾಗಿ ಈಗಲೂ ನನಗೆ ನೋಟೀಸ್ ಬರುತ್ತಿದೆ. ಅದೂ ಕೂಡಾ ಶುಕ್ರವಾರದಂದೇ ಕಛೇರಿಗೆ ಬಂದು ವಿಚಾರಣೆಗೆ ಹಾಜರಾಗಬೇಕು ಎನ್ನುವ ಷರತ್ತನ್ನೂ ನೀಡುತ್ತಿದ್ದಾರೆ.
ಶುಕ್ರವಾರ ಬೆಳಗ್ಗೆ 11 ಗಂಟೆಯಿ0ದ 3 ಗಂಟೆ ತನಕವೂ ಅಲ್ಲೇ ಕಾಯಬೇಕಾಗುತ್ತಿದೆ. ನನಗೆ ಶಾಸಕರ ಕಡೆಯಿಂದ ಬೆದರಿಕೆಯಿದೆ. ಎಲ್ಲರೂ ಶುಕ್ರವಾರ ಮಸೀದಿಗೆ ಹೋಗುವ ಸಮಯದಲ್ಲಿ ನಾನೊಬ್ಬನೇ ಸಹಾಯಕ ಆಯುಕ್ತರ ಕಛೇರಿಯಲ್ಲಿ ನಿಲ್ಲುವಂತಾಗಿದೆ. ನನ್ನ ಮೇಲೆ ಯಾವುದೇ ಕೋಮುಗಲಭೆಯ ಕೇಸಿಲ್ಲ, ಯಾವೊಬ್ಬ ಹಿಂದೂವು ನನ್ನ ಮೇಲೆ ದೂರು ದಾಖಲಿಸಿಲ್ಲ, ನನ್ನ ಮೇಲೆ 307 ಕೇಸಿಲ್ಲ, ಯಾವ ಸಮುದಾಯವನ್ನೂ ಬೈದಿಲ್ಲ.
ಇದ್ದ ವಿಚಾರವನ್ನು ನೇರವಾಗಿ ಹೇಳಿದ್ದೇನೆ ಎಂದಿದ್ದಾರೆ. ಗಡಿಪಾರು ಯಾರನ್ನು ಮಾಡಬೇಕಾಗಿರುವುದು? ಕೊಲೆ ಆರೋಪಿಗಳು, ಧಾರ್ಮಿಕ ಕ್ಷೇತ್ರದಲ್ಲಿ ಸೆಕ್ಸೀ ವಿಡಿಯೋ ಮಾಡಿದ ಕೆಲವರೆಲ್ಲಾ ನಮ್ಮ ಶಾಸಕರ ಜೊತೆಗಿದ್ದಾರೆ. ಅಂತವರನ್ನು ಗಡಿಪಾರು ಮಾಡಬೇಕು. ಉಪ್ಪಿನಂಗಡಿಯಲ್ಲಿ ಸಾರ್ವಜನಿಕವಾಗಿಯೇ ತಲವಾರು ಕಾಳಗ ಮಾಡಿದವರಿಗೆ ಗಡಿಪಾರಿನ ನೋಟೀಸ್ ಇಲ್ಲ, ಜಲೀಲ್ ಕರೋಪಾಡಿಯನ್ನು ಹತ್ಯೆ ಮಾಡಿದ ವ್ಯಕ್ತಿ ಶಾಸಕರ ಜೊತೆಗೇ ಇದ್ದಾರೆ. ಅವರಿಗೆ ಯಾವುದೇ ಗಡಿಪಾರು ನೋಟೀಸ್ ಇಲ್ಲ. ನಾಲ್ಕೈದು ಕೇಸ್ ಇದ್ದವರ ಜೊತೆಗೆ ಯಾವುದೇ ಕಾರಣಕ್ಕೂ ಸುತ್ತಾಡುವಂತಿಲ್ಲ ಎಂದು ಪೋಲೀಸರೇ ಎಚ್ಚರಿಕೆ ನೀಡಿದ್ದಾರೆ.
ನಾಲ್ಕೈದು ಕೇಸು ಇದ್ದವರು ಶಾಸಕರ ಜೊತೆಗೇ ಇದ್ದಾರೆ. ನಾನು ಈ ವಿಚಾರವನ್ನು ಹೇಳಿದ ತಕ್ಷಣ ಶಾಸಕರು ಪೋಲೀಸರಿಗೆ ಒತ್ತಡ ಹಾಕಿ ನನ್ನನ್ನು ಗಡಿಪಾರು ಮಾಡಲು ಸೂಚಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.






