December 3, 2025
WhatsApp Image 2025-11-29 at 9.08.59 AM

ಮಂಗಳೂರು: ನಗರ ಹೊರವಲಯದ ಮೂಡುಶೆಡ್ಡೆ ಗ್ರಾ.ಪಂ. ಆವರಣದಲ್ಲಿ ಮಗಳು ತನ್ನ ತಾಯಿಗೆ ಅಮಾನವೀಯವಾಗಿ ಹಲ್ಲೆ ನಡೆಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಡುಶೆಡ್ಡೆಯ ಶಿವನಗರ ಎಂಬಲ್ಲಿ ತಾಯಿ ಮತ್ತು ಮಗಳು ವಾಸಿಸುತ್ತಿದ್ದು, ಇವರ ಮಧ್ಯೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ತಾಯಿ ಕಾವೂರು ಠಾಣೆಗೆ ತೆರಳಿ ದೂರುತ್ತಿದ್ದರು ಎಂದು ತಿಳಿದು ಬಂದಿದೆ. ಪೊಲೀಸರು ತಾಯಿ ಮತ್ತು ಮಗಳಿಗೆ ಬುದ್ಧಿ ಹೇಳಿ ಕಳುಹಿಸಿಕೊಡುತ್ತಿದ್ದರು ಎನ್ನಲಾಗಿದೆ.

ಇತ್ತೀಚೆಗೆ ತಾಯಿಯು ಮೂಡುಶೆಡ್ಡೆ ಗ್ರಾ.ಪಂ.ಗೆ ತೆರಳಿ ಮಗಳ ವಿರುದ್ಧ ದೂರು ನೀಡತೊಡಗಿದ್ದಾರೆ. ಮೂರು ದಿನದ ಹಿಂದೆ ತಾಯಿ ಗ್ರಾ.ಪಂ. ಕಚೇರಿಗೆ ತೆರಳಿ ದೂರು ನೀಡುತ್ತಿದ್ದಾಗ ಮಗಳು ತಾಯಿಯನ್ನು ತಳ್ಳಿದ್ದಾಳೆ. ತಾಯಿ ಕೂಡ ಮಗಳಿಗೆ ತಿರುಗೇಟು ನೀಡಿದ್ದರೂ ಕೂಡ ಆಕ್ರೋಶಗೊಂಡ ಮಗಳು ಚಪ್ಪಲಿಯಿಂದ ತಾಯಿಯ ಮುಖಕ್ಕೆ ಅಮಾನವೀಯವಾಗಿ ಹಲ್ಲೆ ನಡೆಸಿರುವುದು ವೀಡಿಯೋದಲ್ಲಿ ಕಂಡು ಬಂದಿದೆ. ಇದನ್ನು ಗ್ರಾ.ಪಂ. ಕಚೇರಿಯಲ್ಲಿದ್ದವರು ವೀಡಿಯೋ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಗಳ ಅಮಾನವೀಯ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ವೀಡಿಯೋದಲ್ಲಿ ಗ್ರಾ.ಪಂ.ನ ಕೆಲವು ಜನಪ್ರತಿನಿಧಿಗಳು, ಸಿಬ್ಬಂದಿಗಳು ಕಂಡು ಬರುತ್ತಿದೆ. ಇವರು ವೀಡಿಯೋ ಮಾಡಿದರೇ ವಿನಃ ತಾಯಿಗೆ ಹಲ್ಲೆ ನಡೆಸದಂತೆ ಮಗಳನ್ನು ತಡೆಯಲಿಲ್ಲ ಮತ್ತು ಪೊಲೀಸರಿಗೂ ದೂರು ನೀಡಲಿಲ್ಲ ಎಂದು ಜನರು ಆರೋಪಿಸಿದ್ದಾರೆ. ಪೊಲೀಸರು ತಾಯಿ ಮತ್ತು ಮಗಳನ್ನು ಕರೆದು ವಿಚಾರಣೆ ನಡೆಸಬೇಕು ಮತ್ತು ಸಾರ್ವಜನಿಕವಾಗಿ ತಾಯಿಗೆ ಹಲ್ಲೆ ನಡೆಸಿದ ಮಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕಿತ್ತು ಎಂಬ ಮಾತು ಕೇಳಿ ಬಂದಿದೆ.

ತಾಯಿ-ಮಗಳ ಹೊಡೆದಾಟದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿಲ್ಲ. ವೀಡಿಯೋ ಮಾಡಿ ಅದಕ್ಕೆ ಹೆಚ್ಚು ವೀಕ್ಷಣೆ ಬರುವ ಉದ್ದೇಶದಿಂದ ವೈರಲ್ ಮಾಡಿದ ವ್ಯಕ್ತಿಯ ಬಗ್ಗೆ ಯಾರಾದರೂ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆಂದು ವರದಿಯೊಂದರಲ್ಲಿ‌ ಉಲ್ಲೇಖವಾಗಿದೆ.

About The Author

Leave a Reply