

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಎಂ.ಎಸ್. ಉಮೇಶ್ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 80 ವರ್ಷ ವಯಸ್ಸಿನ ಅವರು ಚಿಕಿತ್ಸೆ ಫಲಕಾರಿ ಆಗದೆ ಕೊನೆಯುಸಿರು ಎಳೆದಿದ್ದಾರೆ. ನೂರಾರು ಸಿನಿಮಾಗಳಲ್ಲಿ ನಟಿಸಿ ಎಂ.ಎಸ್. ಉಮೇಶ್ ಅವರು ಜನಪ್ರಿಯತೆ ಪಡೆದಿದ್ದರು.
ಕಳೆದ ಕೆಲವು ದಿನಗಳಿಂದ ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತರಾಗಿದ್ದಾರೆ. ಉಮೇಶ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ ಅನೇಕ ಕಲಾವಿದರು ಹೋಗಿ ಮಾತನಾಡಿಸಿದ್ದರು. ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದರು. ಆದರೆ ಪ್ರಾರ್ಥನೆ ಫಲಿಸಿಲ್ಲ.
ತನ್ನ ವಿಶಿಷ್ಟವಾದ ಸ್ವರ, ಮ್ಯಾನರಿಸಂ ಮತ್ತು ನಟನೆಯಿಂದ ಉಮೇಶ್ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ಬಹುತೇಕ ಎಲ್ಲ ನಾಯಕ ನಟರ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಿಗೆ ಜೀವ ತುಂಬಿದ್ದರು.
ಇತ್ತೀಚೆಗೆ ಉಮೇಶ್ ಮನೆಯಲ್ಲೇ ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ವೇಳೆ ಅವರಿಗೆ 4ನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಹೆಚ್ಚಿನ ಪರೀಕ್ಷೆಗಳಿಗೆ ಒಳಪಡಿಸಿದ್ದ ವೈದ್ಯರು ರೋಗವನ್ನು ಖಚಿತಪಡಿಸಿಕೊಂಡು, ಕಿಮೊಥೆರಪಿ ಹಾಗೂ ಇಮ್ಯೂನೋಥೆರಪಿ ಮೂಲಕ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು. ಈಗ ಉಮೇಶ್ ನಿಧನರಾಗಿರುವುದು ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ನೋವುಂಟು ಮಾಡಿದೆ.






