

ಉಡುಪಿ: ಯುವತಿಯನ್ನು ನಿರ್ಜನ ಪ್ರದೇಶದಲ್ಲಿ ಅಡ್ಡಗಟ್ಟಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಹಿಂದು ಜಾಗರಣಾ ವೇದಿಕೆಯ ಕಾರ್ಯಕರ್ತನೋರ್ವನನ್ನು ಉಡುಪಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪೆರ್ಡೂರು ಹಿಂದು ಜಾಗರಣಾ ವೇದಿಕೆಯ ನಾಯರ್‌ಕೋಡು ಘಟಕದ ಪ್ರದೀಪ್ ಪೂಜಾರಿ(26) ಬಂಧಿತ ಆರೋಪಿ. ಈತ ಯುವತಿಯೊಬ್ಬಳನ್ನು ಮದುವೆಯಾಗುವಂತೆ ನಿರಂತರ ಕಿರುಕುಳ ನೀಡುತ್ತಿದ್ದು, ಆಕೆ ಆತನೊಂದಿಗೆ ಮದುವೆಗೆ ನಿರಾಕರಿಸಿದ್ದಳು. ಈ ಬಗ್ಗೆ ಆಕೆ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಆತನನ್ನು ಪೊಲೀಸರು ಬಂಧಿಸಿದ್ದು, ಬಳಿಕ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದನು.
ಪ್ರದೀಪ್ ಪೂಜಾರಿ, ನ.29ರಂದು ನಿರ್ಜನ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ಆ ಯುವತಿಯನ್ನು ಅಡ್ಡಗಟ್ಟಿ ಮತ್ತೆ ಮದುವೆಯಾಗುವಂತೆ ಪೀಡಿಸಿದನು. ಇದಕ್ಕೆ ಆಕೆ ನಿರಾಕರಿಸಿದಾಗ ಆಕೆಯನ್ನು ಅಲ್ಲೇ ಕತ್ತು ಹಿಸುಕಿ ಬೆದರಿಸಿ ಅತ್ಯಾಚಾರ ಎಸಗಿದನು ಎಂದು ದೂರಲಾಗಿದೆ. ಈ ಕುರಿತು ಆಕೆ ಮನೆಯವರಿಗೆ ಮಾಹಿತಿ ನೀಡಿದ್ದು, ಅದರಂತೆ ಪೋಷಕರು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆನ್ಯಾಯಾಂಗ ಬಂಧನ ವಿಧಿಸಿದೆ.






