

ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ, ಮಸೀದಿಯ ಇಮಾಮ್ ಮೌಲಾನಾ ಅಬ್ದುಲ್ ಬಾಸಿತ್ ಅವರು ತ್ವರಿತ ಸ್ಪಂದನೆಯಿಂದ 7 ಪ್ರಯಾಣಿಕರ ಜೀವಗಳನ್ನು ಉಳಿಸಿರುವ ಘಟನೆ ನಡೆದಿದೆ.
ಮಂಗಳವಾರ ಮುಂಜಾನೆ ಅಸ್ಸಾಂ ನ ಶ್ರೀಭೂಮಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ವಾಹನವೊಂದು ರಸ್ತೆಯಿಂದ ಜಾರಿ ಕೆರೆಗೆ ಉರುಳಿದೆ. ಪ್ರಯಾಣಿಕರು ನಿದ್ರಿಸುತ್ತಿದ್ದರು, ಕಿಟಕಿಗಳು ಮುಚ್ಚಿದ್ದವು ಮತ್ತು ವಾಹನ ವೇಗವಾಗಿ ಮುಳುಗಲು ಪ್ರಾರಂಭಿಸಿತು. ಮುಂಜಾನೆಯ ನಿಶ್ಯಬ್ದದಲ್ಲಿ ದೊಡ್ಡ ಅಪಘಾತದ ಶಬ್ದ ಕೇಳಿ ಇಮಾಮ್ ಅಬ್ದುಲ್ ಬಾಸಿತ್ ಹೊರಗೆ ಧಾವಿಸಿ ನೋಡಿದಾಗ ನೀರಿನಲ್ಲಿ ಹೆಡ್ಲೈಟ್ಗಳು ಹೊಳೆಯುತ್ತಿರುವುದು ಕಂಡುಬಂದಿತು. ಅಪಾಯವನ್ನು ಅರಿತ ಅವರು ತಕ್ಷಣವೇ ಮಸೀದಿಯ ಧ್ವನಿವರ್ಧಕವನ್ನು ಬಳಸಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿ ತುರ್ತು ಸಹಾಯಕ್ಕಾಗಿ ಮನವಿ ಮಾಡಿದರು.
ನೆರೆಹೊರೆಯ ನಿವಾಸಿಗಳು ಓಡಿಬಂದು ಕೆರೆಗೆ ಹಾರಿ, ಕಾರಿನ ಕಿಟಕಿಗಳನ್ನು ಒಡೆದು, ವಾಹನವು ಸಂಪೂರ್ಣವಾಗಿ ಮುಳುಗುವ ಮೊದಲು 7 ಪ್ರಯಾಣಿಕರನ್ನು ಹೊರಗೆಳೆದರು. ರಕ್ಷಿಸಲ್ಪಟ್ಟ ಪ್ರಯಾಣಿಕರು ಹಿಂದೂ ಸಮುದಾಯದವರಾಗಿದ್ದು, ಸಿಲ್ಚಾರ್ನಿಂದ ತ್ರಿಪುರಕ್ಕೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.






