

ಬೆಂಗಳೂರು: ಬೆಂಗಳೂರಿನ ಕೂಡ್ಲು ಗೇಟ್ ಸಮೀಪ ಡಿ.9ರಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಬಂಟ್ವಾಳದ ಯುವಕ ಮೃತಪಟ್ಟ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜಿಲಮೊಗರು ಸಮೀಪದ ಅಲ್ಲಿಪಾದೆ ಎಂಬಲ್ಲಿನ ಯುವಕ ಮುಹಮ್ಮದ್ ಹಾರಿಸ್ (34) ಮೃತಪಟ್ಟ ಯುವಕ.
ಮುಹಮ್ಮದ್ ಹಾರಿಸ್ ಬೆಂಗಳೂರಿನ ಏಸಿ ಕಂಪನಿಯೊಂದರಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದು, ಕೆಲಸದ ನಿಮಿತ್ತ ತನ್ನ ಸಹೋದ್ಯೋಗಿಯೋರ್ವನೊಡನೆ ಬೈಕಿನಲ್ಲಿ ತೆರಳುತ್ತಿದ್ದಾಗ ಗೂಡ್ಸ್ ವಾಹನವು ಹಿಂಬದಿಯಿಂದ ಡಿಕ್ಕಿಯಾಗಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಹಾರಿಸ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯವಾಗಿದೆ.
ಯುವಕ ಹಾರಿಸ್ ಆರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಘಟನೆಯ ಸಂಬಂಧ ಎಚ್ ಎಸ್ ಆರ್ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುವಕ ಹಾರಿಸ್ ಮೃತದೇಹವು ಕೋರಮಂಗಲದಲ್ಲಿರುವ ಸೈಂಟ್ ಜಾನ್ಸ್ ಆಸ್ಪತ್ರೆಯ ಶವಾಗಾರದಲ್ಲಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಊರಿಗೆ ಕಳುಹಿಸಲಾಗುವುದು ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಹಿಂಬದಿ ಸವಾರ ಒಡಿಶಾ ಮೂಲದವನಾಗಿದ್ದು, ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.






