January 17, 2026
grama sabe copy

ಪೆರುವಾಯಿ: ಗಂಭೀರ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫೀಸಾ ಅವರ ರಾಜೀನಾಮೆಗೆ ಪಟ್ಟು ಹಿಡಿದ ಗ್ರಾಮಸ್ಥರು, ಗ್ರಾಮಸಭೆಯಲ್ಲಿ ತೀವ್ರ ಪ್ರತಿಭಟನೆ ನಡೆಸಿದ ಪರಿಣಾಮ ಸಭೆಯನ್ನು ಮೊಟಕುಗೊಳಿಸಿದ ಘಟನೆ ಬುಧವಾರ ದಿನಾಂಕ 10/12/2025 ನಡೆಯಿತು. ಅಧ್ಯಕ್ಷರ ವಿರುದ್ಧದ ಆರೋಪಗಳು ತನಿಖೆಯಲ್ಲಿ ಸಾಬೀತಾದರೂ ರಾಜೀನಾಮೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶಗೊಂಡರು.

ಗ್ರಾಮಸಭೆಯು ನಾಡಗೀತೆಯೊಂದಿಗೆ ಪ್ರಾರಂಭವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರು ಸ್ವಾಗತ ಭಾಷಣದ ನಂತರ ಹಿಂದಿನ ಲೆಕ್ಕಪತ್ರ (ಜಮಾ ಖರ್ಚು) ವನ್ನು ಓದಿ ಹೇಳಿದರು. ಈ ಹಂತದಲ್ಲಿ ಗ್ರಾಮಸ್ಥರು ಸಭೆಗೆ ತಡೆಯೊಡ್ಡಿ ಅಧ್ಯಕ್ಷೆ ನಫೀಸಾ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿದರು.

ಕಳೆದ ಗ್ರಾಮಸಭೆಯಲ್ಲಿ ನಡೆದ ರೂ. 9 ಲಕ್ಷಕ್ಕೂ ಅಧಿಕ ಮೊತ್ತದ ಅವ್ಯವಹಾರ ಕುರಿತು ಗ್ರಾಮಸ್ಥರಾದ ಯತೀಶ್ ಪೆರುವಾಯಿರವರು ನೀಡಿದ್ದ ದೂರಿನ ಮೇಲೆ ತಾಲೂಕು ಪಂಚಾಯತ್ ಮಟ್ಟದಲ್ಲಿ ತನಿಖೆ ನಡೆದಿತ್ತು. ಈ ತನಿಖಾ ವರದಿಯಲ್ಲಿ ಅಧ್ಯಕ್ಷೆ ನಫೀಸ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ್ ಎನ್ ಜಿ ರವರ ವಿರುದ್ಧದ ಅವ್ಯವಹಾರವು ದೃಢಪಟ್ಟಿದ್ದು,
ಅವ್ಯವಹಾರದ ಬಗ್ಗೆ ಪ್ರಶ್ನಿಸಿದಾಗ ಹಿಂದಿನ ಸಭೆಯಲ್ಲೇ ಅಧ್ಯಕ್ಷೆ ನಫೀಸಾ ಅವರು ಸಾರ್ವಜನಿಕವಾಗಿ, “ನಿಮ್ಮ ಬಳಿ ದಾಖಲೆ ಇದ್ದರೆ ತಂದು ತೋರಿಸಿ. ಒಂದೇ ಒಂದು ರೂಪಾಯಿ ಅವ್ಯವಹಾರ ಸಾಬೀತಾದರೂ ತಕ್ಷಣವೇ ರಾಜೀನಾಮೆಗೆ ಸಿದ್ಧ” ಎಂದು ಘೋಷಿಸಿದ್ದರು. ಆದರೆ, ತನಿಖಾ ವರದಿಯಲ್ಲಿ ಅವ್ಯವಹಾರ ಸಾಬೀತಾದ ನಂತರ ಗ್ರಾಮಸ್ಥರಾದ ಯತೀಶ್ ಪೆರುವಾಯಿ ಹಾಗೂ ಅವರಿಗೆ ಬೆಂಬಲವಾಗಿ ನಿಂತ ಗ್ರಾಮಸ್ತರು ಅಧ್ಯಕ್ಷರು ರಾಜೀನಾಮೆ ನೀಡಲು ಒತ್ತಾಯಿಸಿದಾಗ, ಅಧ್ಯಕ್ಷರು ತಮ್ಮ ಮಾತಿನಿಂದ ಹಿಂದೆ ಸರಿದರು. ಇದು ಗ್ರಾಮಸ್ಥರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತು.

ಲೋಕಾಯುಕ್ತ ಟ್ರ್ಯಾಪ್ ಮತ್ತು ಜೈಲು ಶಿಕ್ಷೆ ಹಿನ್ನೆಲೆ

ಅಧ್ಯಕ್ಷೆ ನಫೀಸಾ ಅವರ ಮೇಲೆ ಈ ಹಿಂದೆ ಸಹ ಗಂಭೀರ ಆರೋಪಗಳಿದ್ದು, ಇದು ಗ್ರಾಮಸ್ಥರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ. 30 ಕೊಳವೆಬಾವಿ ಫಲಾನುಭವಿಗಳಿಂದ ತಲಾ ₹10,000ದಂತೆ ಒಟ್ಟು ₹3,00,000 ಲಂಚದ ಬೇಡಿಕೆ ಇಟ್ಟಿದ್ದರು. ₹10,000 ಪಡೆಯುವಾಗಲೇ ಅವರು ಲೋಕಾಯುಕ್ತ ಟ್ರ್ಯಾಪ್‌ನಲ್ಲಿ ಸಿಕ್ಕಿಬಿದ್ದರು. ಈ ಹಿನ್ನೆಲೆಯಲ್ಲಿ ಅವರು 14 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು.ಇಷ್ಟೆಲ್ಲಾ ಆದರೂ ಮತ್ತೆ ಪಂಚಾಯತ್ ಅಧ್ಯಕ್ಷೆಯಾಗಿ ಅಧಿಕಾರದಲ್ಲಿ ಮುಂದುವರಿದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಮತ್ತಷ್ಟು ತೀವ್ರತೆ ನೀಡಿದೆ.

ಗ್ರಾಮಸಭೆ ಮೊಟಕು ಮತ್ತು ಗ್ರಾಮಸ್ಥರ ಪ್ರತಿಜ್ಞೆ
ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ, ಪರಿಸ್ಥಿತಿ ನಿಯಂತ್ರಿಸಲಾಗದೆ ಗ್ರಾಮಸಭೆಯ ನೋಡಲ್ ಅಧಿಕಾರಿ ಅವರು ಸಭೆಯನ್ನು ಮೊಟಕುಗೊಳಿಸುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ, ಪ್ರತಿಭಟನಾನಿರತ ಗ್ರಾಮಸ್ಥರು, “ಯಾವುದೇ ಕಾರಣಕ್ಕೂ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಇವರ ಅಧ್ಯಕ್ಷತೆಯಲ್ಲಿ ಇನ್ನೂ ಮುಂದೆ ಯಾವುದೇ ಸಭೆ ನಡೆಸಲು ಬಿಡುವುದಿಲ್ಲ” ಎಂದು ಸಾಮೂಹಿಕವಾಗಿ ಪ್ರತಿಜ್ಞೆ ಮಾಡಿದರು. ಈ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ರವರಿಗೆ ದೂರು ಸಲ್ಲಿಸಿ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

About The Author

Leave a Reply