January 17, 2026
WhatsApp Image 2025-12-17 at 11.07.33 AM

ಬೆಳ್ತಂಗಡಿ: ನಗರದ ಸಂತೆಕಟ್ಟೆ ಬಳಿ ಇರುವ ಪೃಥ್ವಿ ಆಭರಣ ಮಳಿಗೆಯ ವ್ಯವಸ್ಥಾಪಕನಾಗಿರುವ ಅಶೋಕ್‌ ಬಂಗೇರ ಹಾಗೂ ಇತರರು ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದು, ಬೆಳ್ತಂಗಡಿ ಠಾಣೆಯಲ್ಲಿ ಬಿಎನ್ ಎಸ್ u/s 126(2),115(1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವೇಣೂರು ಸಮೀಪದ ಮೂವರು ವಿದ್ಯಾರ್ಥಿಗಳು ಸೋಮವಾರ ಶಾಲೆಗೆ ರಜೆ ಹಾಕಿ, ಮಧ್ಯಾಹ್ನದ ಬಳಿಕ ಬೆಳ್ತಂಗಡಿ ಪೇಟೆಯಲ್ಲಿ ಪ್ರತಿ ಸೋಮವಾರ ನಡೆಯುವ ಸಂತೆಗೆಂದು ಬಂದಿದ್ದರು. ಅಲ್ಲಿ ಸುತ್ತಾಡಿದ ಬಳಿಕ ಬೆಳ್ತಂಗಡಿ ಸಂತೆಕಟ್ಟೆ ಬಳಿ ಇರುವ ಪೃಥ್ವಿ ಆಭರಣ ಮಳಿಗೆಯ ಪಕ್ಕದಲ್ಲಿ ಕುಳಿತು ಮೊಬೈಲ್‌ನಲ್ಲಿ ಆಟವಾಡುತ್ತಿದ್ದ ವೇಳೆ ಮಕ್ಕಳ ಹೆಸರನ್ನು ಕೇಳಿ ಮುಸ್ಲಿಂ ವಿದ್ಯಾರ್ಥಿಗಳು ಎಂದು ತಿಳಿದು, ಆ ಬಳಿಕ ಮಕ್ಕಳಿಗೆ ಧರ್ಮದ ಹೆಸರಿನಲ್ಲಿ ನಿಂದನೆ ಮಾಡಿ, ಕೋಣೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಹಲ್ಲೆ ನಡೆಸಿದ್ದನ್ನು ಪ್ರಶ್ನಿಸಲು ಹೋಗಿದ್ದ ವಿದ್ಯಾರ್ಥಿಗಳ ಪೋಷಕರೊಂದಿಗೆ ಆಭರಣ ಮಳಿಗೆಯ ವ್ಯವಸ್ಥಾಪಕ ಸಹಿತ ಇತರೆ ಸಿಬ್ಬಂದಿಗಳು ವಾಗ್ವಾದ ನಡೆಸಿ ನಿಂದಿಸಿರುವ ಆರೋಪ ಕೂಡ ಕೇಳಿಬಂದಿದೆ.

ಘಟನೆಯ ವೇಳೆ ಮೂವರು ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ ಹಲ್ಲೆಯಿಂದ ತಪ್ಪಿಸಿಕೊಂಡು ಓಡಿ ಹೋಗಿ ನಾಪತ್ತೆಯಾಗಿದ್ದನು. ಆ ಬಳಿಕ ರಾತ್ರಿ ಹುಡುಕಾಡಿದಾಗ ಪೋಷಕರ ಕೈಗೆ ಸಿಕ್ಕಿದ್ದಾನೆ. ಸದ್ಯ ಹಲ್ಲೆಯಿಂದ ಗಾಯಗೊಂಡಿರುವ ಮೂವರು ವಿದ್ಯಾರ್ಥಿಗಳು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಮಕ್ಕಳ ಹೇಳಿಕೆ ದಾಖಲಿಸಿದ ಪೊಲೀಸರು ಮಂಗಳವಾರ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಬೆಳ್ತಂಗಡಿ ಎಸ್‌ಡಿಪಿಐ ಪಕ್ಷದ ಮುಖಂಡರಾದ ಅಕ್ಟರ್ ಬೆಳ್ತಂಗಡಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದು, “ಮಕ್ಕಳ ಧರ್ಮವನ್ನು ಕೇಳಿ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಲಾಗಿದೆ. ಇದು ಖಂಡನೀಯ. ಪೊಲೀಸ್ ಇಲಾಖೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

About The Author

Leave a Reply