

ಬುರ್ಖಾ ಧರಿಸದೆ ಮನೆಯಿಂದ ಹೊರಬಂದಿದ್ದಾರೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಕೊಂದು ಶೌಚಾಲಯದ ಗುಂಡಿಯೊಳಗೆ ಹೂತುಹಾಕಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಢಿ ದೌಲತ್ ಎಂಬ ಹಳ್ಳಿಯಲ್ಲಿ ನಡೆದಿದೆ. ಪತ್ನಿ ಬುರ್ಖಾ ಧರಿಸದೆ ಹೊರಗೆ ಹೋದದ್ದಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಫಾರೂಕ್ ಎಂಬಾತ ಮೂವರನ್ನು ಕೊಲೆ ಮಾಡಿ ಹೂತು ಹಾಕಿದ ಆರೋಪಿ.
ಫಾರೂಕ್‌ನ ಪತ್ನಿ ತಾಹಿರಾ ಮತ್ತು ಪುತ್ರಿಯರಾದ ಅಫ್ರೀನ್ (16) ಮತ್ತು ಸಹ್ರೀನ್ (14) 10 ದಿನಗಳ ಹಿಂದೆ ಕಾಣೆಯಾದ ನಂತರ ಫಾರೂಕ್‌ನ ತಂದೆ ದಾವೂದ್ ಅನುಮಾನಗೊಂಡು ಎಫ್ಐಆರ್ ದಾಖಲಿಸಿದ್ದರು. ವಿಚಾರಣೆಯ ಸಮಯದಲ್ಲಿ ಫಾರೂಕ್ ಹೇಳಿಕೆಗಳಲ್ಲಿ ಅನುಮಾನ ಮೂಡುವ ಅಂಶವನ್ನು ಪೊಲೀಸರು ಗಮನಿಸಿ ಬಳಿಕ ತೀವ್ರ ವಿಚಾರಣೆ ನಡೆಸಿದ್ದರು. ಫಾರೂಕ್ ಅಂತಿಮವಾಗಿ ತನ್ನ ಹೆಂಡತಿ ಮತ್ತು ಹಿರಿಯ ಮಗಳನ್ನು ಗುಂಡು ಹಾರಿಸಿ, ಕಿರಿಯ ಮಗಳನ್ನು ಕತ್ತು ಹಿಸುಕಿ ಕೊಂದು ಶೌಚಾಲಯಕ್ಕಾಗಿ ಅಗೆದ ಗುಂಡಿಯಲ್ಲಿ ಅವರ ಶವಗಳನ್ನು ಹೂತ ಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ. ಸ್ಥಳೀಯವಾಗಿ ಆತ ಒಂದು ಪಿಸ್ತೂಲನ್ನು ಕೊಲೆ ಮಾಡುವ ಉದ್ದೇಶದಿಂದ ಖರೀದಿಸಿ ತಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಡಿ.8ರಂದು ಈ ಕೃತ್ಯ ಎಸಗಿದ್ದಾನೆ. ಬುರ್ಖಾದ ಕಾರಣ ಜಗಳವಾಡಿ ತವರು ಮನೆಗೆ ಹೋಗಿದ್ದ ಹೆಂಡತಿಯನ್ನು ಅಂದು ಫಾರೂಕ್ ಮನೆಗೆ ಕರೆಸಿಕೊಂಡಿದ್ದ. ರಾತ್ರಿ ಹೊತ್ತು ಚಹಾ ಮಾಡಿಕೊಡು ಎಂದು ಹೆಂಡತಿಯನ್ನು ಎಬ್ಬಿಸಿ ಪಿಸ್ತೂಲಿನಿಂದ ಶೂಟ್ ಮಾಡಿದ್ದ. ಗುಂಡಿನ ಸದ್ದು ಕೇಳಿ ಮಕ್ಕಳಿಬ್ಬರು ಎಚ್ಚೆತ್ತಾಗ ಹಿರಿಯ ಮಗಳಿಗೆ ಗುಂಡು ಹಾರಿಸಿದ್ದಾನೆ. ಕಿರಿಯವಳು ತಪ್ಪಿಕೊಂಡು ಓಡಿದಾಗ ಬೆನ್ನಟ್ಟಿ ಹೋಗಿ ಹಿಡಿದು ಕತ್ತು ಹಿಸುಕಿ ಉಸಿರುಕಟ್ಟಿಸಿ ಕೊಲೆ ಮಾಡಿ ಬಳಿಕ ಮೂರೂ ಶವಗಳನ್ನು ಶೌಚಗುಂಡಿಗೆ ಹಾಕಿ ಮುಚ್ಚಿಟ್ಟಿದ್ದ. ಮನೆಯವರ ಬಳಿ ಹೆಂಡತಿ ಮಕ್ಕಳನ್ನು ದೂರದ ಶಾಮ್ಲಿಯ ಬಾಡಿಗೆ ಮನೆಗೆ ಕಳುಹಿಸಿದ್ದೇನೆ ಎಂದು ಸುಳ್ಳು ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.






