

ಶಿವಮೊಗ್ಗ : ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಬಂದು ಬಳಿಕ ಆರೋಪಿಯಾಗಿರುವ ಚಿನ್ನಯ್ಯ ಇದೀಗ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಇಂದು ಬೆಳಗ್ಗೆ ಆತನ ಪತ್ನಿ, ಸಹೋದರಿ ಮತ್ತು ವಕೀಲರು ಚಿನ್ನಯ್ಯನನ್ನು ಶಿವಮೊಗ್ಗ ಜೈಲಿನಿಂದ ಕರೆದೊಯ್ದರು.
ಆತನಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನ.24ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಪಡೆಯಲು ₹ 1 ಲಕ್ಷ ಭದ್ರತಾ ಠೇವಣಿ ನೀಡಬೇಕು ಎಂದು ಷರತ್ತು ವಿಧಿಸಿತ್ತು.
ಆದರೆ ಭದ್ರತಾ ಠೇವಣಿ ಮೊತ್ತ ಪಾವತಿಸಲು ವಿಳಂಬವಾದ ಹಿನ್ನೆಲೆಯಲ್ಲಿ ಬಿಡುಗಡೆ ಆಗಿರಲಿಲ್ಲ. ಮಂಗಳೂರಿನಿಂದ ಬುಧವಾರ ರಾತ್ರಿ ಶಿವಮೊಗ್ಗಕ್ಕೆ ಬಂದಿದ್ದ ಚಿನ್ನಯ್ಯನ ಪತ್ನಿ ಮಲ್ಲಿಕಾ ಹಾಗೂ ಸಹೋದರಿ ಮತ್ತು ಚಿನ್ನಯ್ಯನ ಪರ ವಕೀಲರು ಇಲ್ಲಿನ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ರಂಗನಾಥ್ ಅವರಿಗೆ ಜಾಮೀನು ಪ್ರಕ್ರಿಯೆಯ ದಾಖಲೆಗಳನ್ನು ಸಲ್ಲಿಸಿದ್ದರು. ಹೀಗಾಗಿ ಬೆಳಿಗ್ಗೆ 8.30ಕ್ಕೆ ಬಿಡುಗಡೆ ಮಾಡಲಾಯಿತು.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಪ್ರತ್ಯಕ್ಷವಾಗಿದ್ದ. ಮಾಸ್ಕ್ ಧರಿಸಿ ತನಿಖಾ ತಂಡಕ್ಕೆ ಶವಗಳನ್ನು ಹೂತಿಟ್ಟ ಜಾಗ ತೋರಿಸುತ್ತಿದ್ದ. ಈತ ತಿಳಿಸಿದ ಕಡೆಗಳಲ್ಲಿ ಅವಶೇಷಗಳು ಪತ್ತೆಯಾಗದ ಹಿನ್ನೆಲೆ ಮಾಸ್ಕ್ ಮ್ಯಾನ್ ಅಲಿಯಾಸ್ ಚಿನ್ನಯ್ಯನನ್ನು ಬಂಧಿಸಲಾಗಿತ್ತು. ಬೆಳ್ತಂಗಡಿ ನ್ಯಾಯಾಲಯದಲ್ಲಿ ಈತನ ವಿಚಾರಣೆ ನಡೆಯುತ್ತಿತ್ತು. ಸುರಕ್ಷತೆ ದೃಷ್ಟಿಯಿಂದ ಬುರುಡೆ ಚಿನ್ನಯ್ಯನನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.
ಬುರುಡೆ ಚಿನ್ನಯ್ಯ ಬುಧವಾರ ಸಂಜೆಯೆ ಬಿಡುಗಡೆ ಅಗಬೆಕಿತ್ತು. ಆದರೆ ದಕ್ಷಿಣ ಕನ್ನಡದಿಂದ ಆತನ ಪತ್ನಿ ಬರುವುದು ತಡವಾಗಿತ್ತು. ಸಂಜೆ 6.30ರ ಬಳಿಕ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೆ ಅವಕಾಶವಿಲ್ಲ. ಅದ್ದರಿಂದ ಇಂದು ಬೆಳಗ್ಗೆ ಬರುಡೆ ಚಿನ್ನಯ್ಯನನ್ನು ರಿಲೀಸ್ ಮಾಡಲಾಗಿದೆ.






