

ಮಂಗಳೂರು: ಡಿ.19 ಶುಕ್ರವಾರ ಮಂಗಳೂರಿನಲ್ಲಿ ನಡೆದ ಎಸ್.ಡಿ.ಪಿ.ಐ ಪ್ರತಿಭಟನಾ ಸಭೆಯ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಅವುಗಳನ್ನು ಪರಿಶೀಲಿಸಿದಾಗ ಹಲವು ಸುಳ್ಳು ಮಾಹಿತಿಗಳನ್ನು ಹಾಗೂ ಮಾನ್ಯ ನ್ಯಾಯಾಲಯಗಳ ಕೆಲವು ತೀರ್ಪುಗಳ ಆಯ್ದ ಭಾಗಗಳನ್ನು ಮಾತ್ರ ಸಾರ್ವಜನಿಕರಿಗೆ ತಿಳಿಸಿ ಗೊಂದಲ ಸೃಷ್ಟಿಸಲು ಯತ್ನಿಸಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದ್ದು, ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ದೂರಿನ ವಿಚಾರಣೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಪತ್ರಿಕಾ ಪ್ರಕಟಣೆಯಲ್ಲಿ ವಿವಿಧ ನ್ಯಾಯಾಲಯಗಳ ತೀರ್ಪುಗಳ ಆಯ್ದ ಭಾಗಗಳನ್ನು ಮಾತ್ರ ಉಲ್ಲೇಖಿಸುವ ಮೂಲಕ, ಎಸ್.ಡಿ.ಪಿ.ಐ ದೇಶದ್ರೋಹಿ ಅಥವಾ ಭಯೋತ್ಪಾದಕ ಕೃತ್ಯಗಳಲ್ಲಿ ಪಾತ್ರವಹಿಸಿರುವಂತೆ ಬಿಂಬಿಸುವ ಪ್ರಯತ್ನ ನಡೆಯುತ್ತಿರುವುದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಉದಾಹರಣೆಗೆ, ಮೇ 2023ರಲ್ಲಿ ಯುಎಪಿಎ ಕಾಯ್ದೆಯಡಿ ಜಪ್ತಿ ಮಾಡಲಾಗಿದ್ದ ಎಸ್.ಡಿ.ಪಿ.ಐ ಮಂಗಳೂರು ಕಚೇರಿ ಸಂಬಂಧ ಕರ್ನಾಟಕ ಉಚ್ಚ ನ್ಯಾಯಾಲಯವು ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಿದ್ದನ್ನು ಮಾತ್ರ ಉಲ್ಲೇಖಿಸಿ, ಪಕ್ಷವು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳುವುದು ಸರಿಯೇ ಎಂಬ ಪ್ರಶ್ನೆಯನ್ನು ಪ್ರಕಟಣೆಯಲ್ಲಿ ಎತ್ತಲಾಗಿದೆ.
ಅದೇ ರೀತಿ, ಜಿಲ್ಲೆಯೊಂದರಲ್ಲಿ ನಡೆದ ಕೋಮು ದ್ವೇಷ ಹಿನ್ನೆಲೆಯ ಕೊಲೆ ಪ್ರಕರಣದಲ್ಲಿ ಎಸ್.ಡಿ.ಪಿ.ಐಗೆ ಸೇರಿದ ಗ್ರಾಮ ಪಂಚಾಯತ್ ಸದಸ್ಯನೊಬ್ಬ ಆರೋಪಿಯಾಗಿರುವುದನ್ನು ಮುಂದಿಟ್ಟು, ನ್ಯಾಯಾಲಯದ ಆದೇಶಗಳ ಆಯ್ದ ಭಾಗಗಳನ್ನು ಮಾತ್ರ ಆಧರಿಸಿ ಸಂಪೂರ್ಣ ಸಂಘಟನೆಯನ್ನು ಸಂಚುಕೋರ ಮತ್ತು ಕೊಲೆಗಾರರ ಸಂಘಟನೆ ಎಂದು ಕರೆಯುವುದು ನ್ಯಾಯಸಮ್ಮತವೇ ಎಂಬ ಪ್ರಶ್ನೆಯನ್ನೂ ಮುಂದಿಡಲಾಗಿದೆ.
ಮಾನ್ಯ ನ್ಯಾಯಾಲಯಗಳ ತೀರ್ಪುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೇ, ಆಯ್ದ ಭಾಗಗಳನ್ನು ಮಾತ್ರ ಜನರಿಗೆ ತಲುಪಿಸುವುದು ಸುಳ್ಳು ಸುದ್ದಿ ಪ್ರಸಾರದ ಭಾಗವಾಗಿದೆ ಎಂದು ಹೇಳಿರುವ ಪ್ರಕಟಣೆ, ಇಂತಹ ಪ್ರಶ್ನೆಗಳನ್ನು ಪ್ರತಿಭಟನಾಕಾರರು ಮೊದಲು ತಮ್ಮಲ್ಲೇ ಕೇಳಿಕೊಂಡರೆ ಇಂತಹ ಕೃತ್ಯಗಳಿಗೆ ಅಂತ್ಯ ಕಾಣಬಹುದು ಎಂದು ಅಭಿಪ್ರಾಯಪಟ್ಟಿದೆ.
ಸಾರ್ವಜನಿಕರು ಕೂಡಾ ಇಂತಹ ಸುಳ್ಳು ಮಾಹಿತಿ ಹಾಗೂ ಸಂಚುಗಳ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ಮನವಿ ಮಾಡಲಾಗಿದೆ.






