January 17, 2026
WhatsApp Image 2025-12-22 at 7.57.21 PM

ಮಂಗಳೂರು: ಎಂ.ಆರ್.ಜಿ. ಗ್ರೂಪ್‌ನ ಆಶಾ–ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಪ್ರದಾನ ಸಮಾರಂಭ ‘ನೆರವು–2025’ ಡಿಸೆಂಬರ್ 25ರಂದು ಮಂಗಳೂರಿನ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸುಮಾರು 4 ಸಾವಿರ ಕುಟುಂಬಗಳು ಹಾಗೂ 100ಕ್ಕೂ ಅಧಿಕ ಸಂಘ–ಸಂಸ್ಥೆಗಳಿಗೆ ಒಟ್ಟು ₹9.5 ಕೋಟಿ ಮೊತ್ತದ ನೆರವು ವಿತರಿಸಲಾಗುವುದು ಎಂದು ಯೋಜನೆಯ ಪ್ರವರ್ತಕರಾದ ಎಂ.ಆರ್.ಜಿ. ಗ್ರೂಪ್‌ನ ಚೇರ್ಮನ್ ಡಾ. ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೆರವು’ ಯೋಜನೆ ಈ ವರ್ಷ ಏಳನೇ ವರ್ಷವನ್ನು ಪೂರೈಸುತ್ತಿದೆ ಎಂದು ಹೇಳಿದರು. ಯೋಜನೆ ಇನ್ನೂ ಮೂರು ವರ್ಷಗಳ ಕಾಲ ಮುಂದುವರಿಯಲಿದ್ದು, ದಶಮಾನೋತ್ಸವದ ಬಳಿಕ ಫಲಾನುಭವಿಗಳನ್ನು ಒಗ್ಗೂಡಿಸಿ ಯೋಜನೆಗೆ ಸಾಮೂಹಿಕ ಸ್ವರೂಪ ನೀಡುವ ಚಿಂತನೆ ಇದೆ. ಈ ವಿಸ್ತರಣೆಯಿಂದ ಮುಂದಿನ ದಿನಗಳಲ್ಲಿ ಪ್ರತಿವರ್ಷ ಕನಿಷ್ಠ 14 ಸಾವಿರ ಕುಟುಂಬಗಳಿಗೆ ನೆರವು ನೀಡುವ ಸಾಧ್ಯತೆ ಉಂಟಾಗಲಿದೆ ಎಂದು ಅವರು ಹೇಳಿದರು. ಆಧುನಿಕ ತಂತ್ರಜ್ಞಾನ ಯುಗದಲ್ಲಿಯೂ ವೈದ್ಯಕೀಯ ಚಿಕಿತ್ಸೆ ಎಲ್ಲರಿಗೂ ಸುಲಭವಾಗಿ ಲಭ್ಯವಾಗುತ್ತಿಲ್ಲ ಎಂಬ ವಾಸ್ತವವನ್ನು ಉಲ್ಲೇಖಿಸಿದ ಡಾ. ಶೆಟ್ಟಿ, ಈ ವರ್ಷ ನೆರವಿನ ಮೊತ್ತದ ದೊಡ್ಡ ಭಾಗವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಾಗಿದೆ ಎಂದರು. ಆಧುನಿಕ ಚಿಕಿತ್ಸೆಯ ಪ್ರಜಾಪ್ರಭುತ್ವೀಕರಣದ ದಿಕ್ಕಿನಲ್ಲಿ ಇದು ನಮ್ಮ ಪ್ರಾಮಾಣಿಕ ಪ್ರಯತ್ನವಾಗಿದೆ ಎಂದು ಹೇಳಿದರು. ಜಾತಿ, ಧರ್ಮ, ಪಂಗಡದಂತಹ ಯಾವುದೇ ಮಾನವ ನಿರ್ಮಿತ ಗಡಿಗಳಿಲ್ಲದೆ ಅವಶ್ಯಕತೆಯೇ ಫಲಾನುಭವಿಗಳ ಆಯ್ಕೆಯ ಏಕೈಕ ಮಾನದಂಡವಾಗಿದೆ ಎಂದು ತಿಳಿಸಿದ ಅವರು, ಅರ್ಜಿಗಳನ್ನು ಸ್ವಾಯತ್ತ ಸಮಿತಿ ಪರಿಶೀಲಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿದೆ ಎಂದರು. ದಿವ್ಯಾಂಗರು, ಡಯಾಲಿಸಿಸ್ ಸೇರಿದಂತೆ ನಿರಂತರ ಚಿಕಿತ್ಸೆ ಅಗತ್ಯವಿರುವವರು, ಶಿಕ್ಷಣ ನೆರವು ಬೇಕಾದ ವಿದ್ಯಾರ್ಥಿಗಳು, ಸಿಂಗಲ್ ಪೇರೆಂಟ್ ಮಕ್ಕಳು, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ನೆರವಿನ ಲಾಭ ಪಡೆಯಲಿದ್ದಾರೆ ಎಂದರು.

ಮನೆ ನಿರ್ಮಾಣ ಹಂತದಲ್ಲಿರುವ ಹಾಗೂ ಗೃಹಪ್ರವೇಶಕ್ಕಾಗಿ ಕಾಯುತ್ತಿರುವ ಕುಟುಂಬಗಳ ಭಾವನಾತ್ಮಕ ಮತ್ತು ಆರ್ಥಿಕ ಸ್ಥಿತಿಯನ್ನು ಮೌಲ್ಯಮಾಪನ ಮಾಡಿ ನೆರವು ನೀಡಲಾಗುತ್ತಿದೆ. ಮನೆ ಕಟ್ಟಲು ಸಹಾಯ ಕೋರಿದ ಅರ್ಜಿಗಳನ್ನೂ ಪುರಸ್ಕರಿಸಲಾಗಿದೆ ಎಂದು ಅವರು ಹೇಳಿದರು. ಯೋಜನೆ ಆರಂಭಿಸಿದ ಮೊದಲ ವರ್ಷದಲ್ಲಿ ಒಟ್ಟು ₹1.25 ಕೋಟಿ ನೆರವು ವಿತರಿಸಲಾಗಿದ್ದು, 28 ಸಂಘ–ಸಂಸ್ಥೆಗಳು ಪ್ರಯೋಜನ ಪಡೆದಿದ್ದವು. ಇದೀಗ ಏಳನೇ ವರ್ಷದಲ್ಲಿ 100ಕ್ಕೂ ಅಧಿಕ ಸಂಘ–ಸಂಸ್ಥೆಗಳಿಗೆ ನೆರವು ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಫಲಾನುಭವಿಗಳ ಆಯ್ಕೆಯಲ್ಲಿ ಪ್ರಾದೇಶಿಕತೆಯನ್ನೂ ಗಮನದಲ್ಲಿಟ್ಟುಕೊಂಡಿದ್ದು, ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಕೊಪ್ಪ, ಸಕಲೇಶಪುರ ಹಾಗೂ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಅರ್ಜಿಗಳನ್ನು ಪರಿಶೀಲಿಸಿ ಆಯ್ಕೆ ಮಾಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಚಲನಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಮೂಡಬಿದ್ರೆಯ ಅಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎಂ.ಆರ್.ಜಿ. ಗ್ರೂಪ್‌ನ ಆಡಳಿತ ನಿರ್ದೇಶಕ ಗೌರವ್ ಪಿ. ಶೆಟ್ಟಿ ಉಪಸ್ಥಿತರಿರಲಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಗುವುದು ಎಂದು ಡಾ. ಶೆಟ್ಟಿ ತಿಳಿಸಿದರು.

About The Author

Leave a Reply