January 17, 2026
WhatsApp Image 2025-12-15 at 9.21.55 AM

ಮಂಗಳೂರು: ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ -೧ (ಪೋಕ್ಸೋ) ದ ನ್ಯಾಯಾಧೀಶರಾದ ಮೋಹನ ಜೆ.ಎಸ್. ಅವರಿದ್ದ ಪೀಠದಲ್ಲಿ ನಡೆದ ಅಪರೂಪದ ಕೊಲೆ ಪ್ರಕರಣದ ವಿಚಾರಣೆ ಇಂದು ಅಂತ್ಯಗೊಂಡಿದೆ. ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ ದಿನಾಂಕ 5-7-2022 ರಂದು ಬೆಳಿಗ್ಗೆ 5:30 ಕ್ಕೆ ಪತಿ ಯೋಹಾನನ್ ಅವರನ್ನು ಪತ್ನಿ ಎಲಿಯಮ್ಮ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದರು. ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣದ ವಿಚಾರಣೆ ವೇಳೆ, ಆರೋಪಿ ಎಲಿಯಮ್ಮ ಸ್ವತಃ “ತಾನು ಕೊಂದಿರುವುದು ಹೌದು” ಎಂದು ದೋಷಾರೋಪಣೆಯ ಸಂದರ್ಭದಲ್ಲಿ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದರು.

ಆದರೆ, ಕೃತ್ಯವನ್ನು ಒಪ್ಪಿಕೊಂಡ ಮಾತ್ರಕ್ಕೆ ಆರೋಪಿಯನ್ನು ಅಪರಾಧಿ ಎಂದು ಘೋಷಿಸದೆ, ನ್ಯಾಯಾಲಯ ಪೂರ್ಣ ಪ್ರಮಾಣದ ಸಾಕ್ಷಿ ವಿಚಾರಣೆ ನಡೆಸಿತು. ಸಾಕ್ಷಿದಾರರು ಕೃತ್ಯವನ್ನು ಆರೋಪಿಯೇ ಮಾಡಿದ್ದಾಗಿ ನುಡಿದಿದ್ದರು. ಈ ಹಂತದಲ್ಲಿ ಆರೋಪಿ ಪರ ವಕೀಲರವರು ಆರೋಪಿಯ ಮಾನಸಿಕ ಸ್ಥಿತಿಗತಿಯ ಬಗ್ಗೆ ನ್ಯಾಯಾಲಯದ ಗಮನ ಸೆಳೆದರು. ಆರೋಪಿ ಎಲಿಯಮ್ಮ “Delusional Disorder” ಎಂಬ ಗಂಭೀರ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು ಎಂಬುದನ್ನು ಸಾಕ್ಷ್ಯ ಸಮೇತ ಕ್ರಾಸ್ ಎಕ್ಸಾಮಿನೇಷನ್ ನಲ್ಲಿ ಸಾಬೀತುಪಡಿಸಲಾಯಿತು.
“ಆರೋಪಿ ಕೃತ್ಯ ನಡೆಸಿದ್ದು ಸಾಬೀತಾದರೂ, ಆಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಾರಣ ಮತ್ತು ಆಕೆಗೆ ತಾನು ಮಾಡುತ್ತಿರುವ ಕೃತ್ಯ ತಪ್ಪು ಎನ್ನುವ ಅರಿವು ಇರಲಿಲ್ಲ. ಆದ್ದರಿಂದ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಅವರಿಗೆ ಅಪರಾಧಿಕ ಹೊಣೆಗಾರಿಕೆ ಇರುವುದಿಲ್ಲ,” ಎಂದು ವಕೀಲ ವಿಕ್ರಮ್ ರಾಜ್ ಎ. ಪ್ರಬಲ ವಾದ ಮಂಡಿಸಿದರು.

ಈ ವಾದವನ್ನು ಆಲಿಸಿ ದಿನಾಂಕ 23-12-2025 ರಂದು ತೀರ್ಪು ಕಾಯ್ದಿರಿಸಿದ್ದ ನ್ಯಾಯಾಧೀಶರಾದ ಮೋಹನ ಜೆ.ಎಸ್. ಅವರು ಇಂದು ತೀರ್ಪು ನೀಡಿದ್ದಾರೆ. ಎಲಿಯಮ್ಮ ಗಂಡನನ್ನು ಕೊಂದಿರುವುದು ದೃಢಪಟ್ಟಿದ್ದರೂ, ಆಕೆಗೆ ಅಪರಾಧಿಕ ಹೊಣೆ ಇಲ್ಲ ಎಂದು ನ್ಯಾಯಾಧೀಶರು ಘೋಷಿಸಿ ಆಕೆಯನ್ನು ಖುಲಾಸೆಗೊಳಿಸಿದ್ದಾರೆ. ತೀರ್ಪಿನ ಭಾಗವಾಗಿ, ಆರೋಪಿಯನ್ನು ನಿಮ್ಹಾನ್ಸ್‌ಗೆ (NIMHANS) ಕಳುಹಿಸುವಂತೆ ಜೈಲು ಅಧೀಕ್ಷಕರಿಗೆ ಸೂಚಿಸಿದ ನ್ಯಾಯಾಲಯ, ಆಕೆಯ ಮಾನಸಿಕ ಸ್ಥಿತಿಯ ಬಗ್ಗೆ ತಪಾಸಣೆ ನಡೆಸಿ, ಆಕೆ ಬಿಡುಗಡೆಗೆ ಯೋಗ್ಯಳಿದ್ದಾಳೆಯೇ ಮತ್ತು ಆಕೆಯಿಂದ ಸ್ವಂತಕ್ಕಾಗಲಿ ಅಥವಾ ಸಮಾಜಕ್ಕಾಗಲಿ ಅಪಾಯವಿದೆಯೇ ಎಂಬ ಬಗ್ಗೆ ವರದಿ ಪಡೆಯುವಂತೆ ಆದೇಶಿಸಿದೆ. ಈ ಪ್ರಕರಣದಲ್ಲಿ ಆರೋಪಿ ಪರವಾಗಿ ನ್ಯಾಯವಾದಿಗಳಾದ ವಿಕ್ರಮ್ ರಾಜ್ ಎ ಮತ್ತು ಜೀವನ್ ಎ.ಎಂ. ವಾದ ಮಂಡಿಸಿದ್ದರು.

About The Author

Leave a Reply