

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧೀನದ ಕಿರಿಯ ಪ್ರಾಥಮಿಕ ಶಾಲೆ ಲಕ್ಷ್ಮೀಕೋಡಿ, ನೂಜಿಬೈಲ್ ಕೊಳ್ನಾಡು ಇಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸರಗಡರ ಸಂಭ್ರಮದೊಂದಿಗೆ ವಿಜೃಂಭಣೆಯಿಂದ ನಡೆಯಿತು. ಮಕ್ಕಳ ಸಾಂಸ್ಕೃತಿಕ ಪ್ರದರ್ಶನಗಳು, ವಿದ್ಯಾರ್ಥಿಗಳ ಉತ್ಸಾಹ ಹಾಗೂ ಪೋಷಕರ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಜಗದೀಶ್ ರೈ ವಹಿಸಿದ್ದರು. ಕಾರ್ಯಕ್ರಮವನ್ನು ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶ್ರಪ್ ಕೆ. ಸಾಲೆತ್ತೂರು ಅವರು ಉದ್ಘಾಟಿಸಿ, ಸರ್ಕಾರಿ ಶಾಲೆಗಳ ಮಹತ್ವ ಹಾಗೂ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಣದ ಪಾತ್ರದ ಬಗ್ಗೆ ಪ್ರೇರಣಾದಾಯಕವಾಗಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಕೊಳ್ನಾಡು ಗ್ರಾಮ ಪಂಚಾಯತ್ ಸ್ಥಳೀಯ ವಾರ್ಡಿನ ಸದಸ್ಯರಾದ ಮಹಮ್ಮದ್ ಮಂಚಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಪುರಸ್ಕೃತರಾದ ಹಸೈನಾರ್ ತಾಳಿತ್ತನೂಜಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿದರು. ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ಸಮಾಜದ ಬೆಳವಣಿಗೆಗೆ ಪೂರಕವೆಂದು ಅಭಿಪ್ರಾಯಪಟ್ಟರು.

ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಶಾಲೆ ಸೇರಿದಂತೆ ಹಲವಾರು ಶಾಲೆಗಳಿಗೆ ಸಂಘ–ಸಂಸ್ಥೆಗಳ ಮೂಲಕ ನೆರವು ಒದಗಿಸಿ, ಶಿಕ್ಷಣ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಹಸೈನಾರ್ ತಾಳಿತ್ತನೂಜಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಸನ್ಮಾನ ಸ್ವೀಕರಿಸಿದ ಹಸೈನಾರ್ ತಾಳಿತ್ತನೂಜಿ ಈ ಹಿಂದೆ ಶಾಲೆಯನ್ನು ಸ್ಥಾಪಿಸಲು ಸ್ಥಳದಾನದೊಂದಿಗೆ ಸಂಪೂರ್ಣ ಸಹಕಾರ ನೀಡಿದ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಮಹಮ್ಮದ್ ಸಾಲೆ,ಮುಚ್ಚುವ ಹಂತದಲ್ಲಿದ್ದ ಶಾಲೆಯನ್ನು ಉಳಿಸುವಲ್ಲಿ ಶ್ರಮ ವಹಿಸಿದ್ದ ದಿವಂಗತ ಅಬ್ದುಲ್ ರಹಿಮಾನ್ ಅದ್ರು ಅವರನ್ನು ಸ್ಮರಿಸಿದರು.ಈಗಿನ ಕ್ರೀಯಾಶೀಲ ಅದ್ಯಕ್ಷರಾದ ಜಗದೀಶ್ ರೈ ಪೆರ್ಲದಬೈಲ್ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು

ಕಾರ್ಯಕ್ರಮದಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಲವೀನಾ ಡಿಸೋಜಾ, ಸವಿತಾ ಬರ್ಕಳ, ಸುಲೋಚನ ರೈ, ಕೊಡುಗೈ ದಾನಿ ಭಾರತಿ ಶೆಟ್ಟಿ ಅಗರಿ, ಅದ್ರಾಮ ಬ್ಯಾರಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಚಂದ್ರಾವತಿ ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ವಂದಿಸಿದರು.






