January 16, 2026
WhatsApp Image 2025-12-30 at 12.40.39 PM

ಪುತ್ತೂರಿನಲ್ಲಿ ಬಿಜೆಪಿ ನಾಯಕನ ಪುತ್ರ ಕೃಷ್ಣ ಜೆ ರಾವ್ ಯುವತಿಯೊಬ್ಬರನ್ನು ಪ್ರೀತಿಸಿ ಗರ್ಭವತಿಯನ್ನಾಗಿಸಿ ಆಕೆಗೆ ಮಗು ಜನಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ DNA ಪರೀಕ್ಷೆಯಲ್ಲಿ ಮಗುವಿಗೆ ತಂದೆಯೆಂದು ಸಾಬೀತಾದರೂ, ಶಿಶು ಜನಿಸಿ 6 ತಿಂಗಳಾದರೂ ಆರೋಪಿ ಮದುವೆಯಾಗಲು ಒಪ್ಪುತ್ತಿಲ್ಲ. ಪ್ರಮುಖ ಬಿಜೆಪಿ ನಾಯಕರ ಸಂಧಾನ ವಿಫಲವಾಗಿದೆ.

ಹೌದು ನ್ಯಾಯಾಲಯದ ನಿರ್ದೇಶನದಂತೆ ಡಿಎನ್​​ಎ ಟೆಸ್ಟ್ ಮಾಡಿ, ಕೃಷ್ಣ ಜೆ.ರಾವ್ ಮಗುವಿನ ತಂದೆ ಎಂಬುದು ಸಾಬೀತಾದರೂ ಆತ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಬಿಜೆಪಿಯ ಪ್ರಮುಖ ನಾಯಕರು, ಆರ್​​ಎಸ್​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್​ ಸೇರಿ ಅನೇಕರು ಸಂಧಾನಕ್ಕೆ ಯತ್ನಿಸಿದ್ದರೂ ವಿಫಲವಾಗಿದೆ. ಪರಿಣಾಮವಾಗಿ ಕಾನೂನು ಹೋರಾಟವೊಂದೇ ನಮಗೆ ಉಳಿದಿರುವ ದಾರಿ ಎಂದು ಸಂತ್ರಸ್ತೆಯ ಕುಟುಂಬ ಹೇಳಿಕೊಂಡಿದೆ.

ಪ್ರಕರಣ ಹಿನ್ನೆಲೆ?

ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ.ರಾವ್, ಶಾಲಾ ದಿನಗಳಿಂದ ಪರಿಚಿತವಾಗಿದ್ದ ಹಿಂದೂ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ನಂತರ ವಂಚಿಸಿದ್ದಾನೆ ಎಂಬ ಆರೋಪ ಸುಮಾರು 7-8 ತಿಂಗಳುಗಳ ಹಿಂದೆ ಕೇಳಿಬಂದಿತ್ತು. ಗರ್ಭವತಿಯಾಗಿದ್ದ ಯುವತಿಯನ್ನು ಮದುವೆಯಾಗುವಂತೆ ಸಂಧಾನ ಮಾಡಿಸಲಾಗಿತ್ತು. ಆರಂಭದಲ್ಲಿ ಮದುವೆಯಾಗಲು ನಿರಾಕರಿಸಿದ್ದ ಆತ ಕೊನೆಗೆ ಒತ್ತಾಯದ ಮೇರೆಗೆ ಒಪ್ಪಿದ್ದ. ಆದರೆ, ಆತನಿಗೆ 21 ವರ್ಷ ವಯಸ್ಸು ಪೂರ್ಣವಾಗದ ಕಾರಣ, ಆದ ನಂತರ ಮದುವೆ ಮಾಡುವುದಾಗಿ ಆತನ ತಂದೆ ಜಗನ್ನಿವಾಸ ರಾವ್ ಭರವಸೆ ನೀಡಿದ್ದರು.

ಆದರೆ, ಮಗು ಜನಿಸುತ್ತಿದ್ದಂತೆಯೇ ಕೃಷ್ಣ ರಾವ್ ಮದುವೆಗೆ ನಿರಾಕರಿಸಿದ್ದ. ನಂತರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬಳಿಕ ಬಂಧನಕ್ಕೊಳಗಾಗಿದ್ದ ಕೃಷ್ಣ ರಾವ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಯುವತಿಗೆ ಹೆರಿಗೆಯಾದ ನಂತರ ‘ಮಗು ನನ್ನದಲ್ಲ’ ಎಂದು ಕೃಷ್ಣ ರಾವ್ ಹೇಳಿದ್ದರಿಂದ ನ್ಯಾಯಾಲಯದ ಆದೇಶದಂತೆ ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು. ಆರೋಪಿ, ಸಂತ್ರಸ್ತೆ ಹಾಗೂ ಮಗುವಿನ ರಕ್ತ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪರೀಕ್ಷೆಯಲ್ಲಿ ಕೃಷ್ಣ ಜೆ.ರಾವ್ ಮಗುವಿನ ತಂದೆ ಎಂಬುದು ದೃಢಪಟ್ಟಿತ್ತು.

ಡಿಎನ್‌ಎ ವರದಿ ಪಾಸಿಟಿವ್ ಬಂದ ಬಳಿಕವೂ ಆರೋಪಿ ಹಾಗೂ ಆತನ ಕುಟುಂಬ ಮದುವೆಗೆ ನಿರಾಕರಿಸಿದ್ದಾರೆ ಎಂಬ ಆರೋಪ ಸಂತ್ರಸ್ತೆಯ ಕುಟುಂಬದಿಂದ ಕೇಳಿಬಂದಿದೆ. ಕಳೆದ ಮೂರು ತಿಂಗಳಿನಿಂದ ಆರ್​ಎಸ್​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಅವರ ನೇತೃತ್ವದಲ್ಲಿ ಹಲವು ಬಾರಿ ಸಂಧಾನ ಮಾತುಕತೆ ನಡೆದರೂ ಯಾವುದೇ ಫಲಿತಾಂಶ ಕಂಡುಬಂದಿಲ್ಲ.

About The Author

Leave a Reply