

ಉಡುಪಿಯ ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಅಕ್ರಂ ಬಂಧನಕ್ಕೆ ಲುಕ್ ಔಟ್ ನೋಟೀಸ್ ಜಾರಿ ಮಾಡಲಾಗಿದೆ.
ಸೆ. 27ರಂದು ಸೈಫುದ್ದೀನ್ ಕೊಲೆ ನಡೆದ ಬಳಿಕ ಸೈಫ್ ಆಪ್ತ ಅಕ್ರಂ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಪ್ರಕರಣದ ತನಿಖೆ ನಡೆಸಿರುವ ಪೊಲೀಸರಿಗೆ ಸೈಫುದ್ದೀನ್ ಕೊಲೆಯಲ್ಲಿ ಅಕ್ರಂ ಪ್ರಮುಖ ಆರೋಪಿ ಎನ್ನುವುದು ತಿಳಿದು ಬಂದಿದೆ. ಇದೀಗ ಸೈಫ್ ಕೊಲೆಗೆ ಸಂಚು ರೂಪಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಅಕ್ರಂ ಬಂಧನಕ್ಕೆ ಉಡುಪಿ ಪೊಲೀಸರು ಇಂಟರ್ ಪೋಲ್ ಸಹಾಯದಿಂದ ಬಲೆ ಬೀಸಿದ್ದಾರೆ.
2016ರ ಜು.14ರಂದು ಆತ್ರಾಡಿ ಸಮೀಪದ ಶೇಡಿಗುಡ್ಡೆ ಎಂಬಲ್ಲಿ ನಡೆದ ಕೆಮ್ಮಣ್ಣುವಿನ ಶೇಖ್ ಮಹಮ್ಮದ್ ತಸ್ಲೀಮ್ ಕೊಲೆ ಪ್ರಕರಣದಲ್ಲಿ ಸೈಫ್ ಜೊತೆ ಅಕ್ರಂ ಕೂಡ ಆರೋಪಿಯಾಗಿದ್ದನು. ಆ ಬಳಿಕ ವ್ಯವಾಹರದಲ್ಲಿ ಇವರಿಬ್ಬರು ಜೊತೆಯಾಗಿದ್ದರು. ಅಕ್ರಂ, ವ್ಯವಹಾರಕ್ಕೆ ಸಂಬಂಧಿಸಿ ಸಾಲಗಳನ್ನು ಸೈಫ್ ಮತ್ತು ಸೈಫ್‌ನ ಪತ್ನಿ ಹೆಸರಿಗೆ ಹಾಗೂ ಲಾಭದ ವ್ಯವಹಾರವನ್ನು ತನ್ನ ಪಾಲಿಗೆ ಮಾಡಿದ್ದನು.
ಇದೇ ವಿಚಾರದಲ್ಲಿ ಮನಸ್ತಾಪ ನಡೆದಿತ್ತು ಎನ್ನಲಾಗಿದೆ. ಅಲ್ಲದೇ ಸೈಫ್ ಅಕ್ರಂ ಮೇಲೆ ಹಲ್ಲೆ ನಡೆಸಿದ್ದ. ಸೈಫ್ ನಿಂದ ಜೀವ ಬೆದರಿಕೆ ಇರುವುದನ್ನು ಅರಿತ ಅಕ್ರಂ ಸೈಫ್ ನ ಸಹಚರರಿಗೆ ಸುಪಾರಿ ನೀಡಿ ಕೊಲೆಗೆ ಸಂಚು ರೂಪಿಸಿದ್ದ. ಕೊಲೆಗೆ ಪ್ಲಾನ್ ಮಾಡಿ ಕೊಲೆಯಾಗುವ ಒಂದು ವಾರದ ಹಿಂದೆ ವಿದೇಶಕ್ಕೆ ತೆರಳಿದ್ದ ಎನ್ನುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.






