January 16, 2026
WhatsApp Image 2025-12-31 at 9.48.58 AM

ಕಾರ್ಕಳ : ಕಾರ್ಕಳದ ಖಾಸಗಿ ಆಸ್ಪತ್ರೆಯೊಂದರ ಮೂವರು ವೈದ್ಯರ ವಿರುದ್ಧ ರೋಗಿಯ ಸಾವಿಗೆ ಕಾರಣರಾದ ಪ್ರಕರಣ ದಾಖಲಾಗಿದೆ. ವೈದ್ಯರ ನಿರ್ಲಕ್ಷ್ಯದ ಕುರಿತು ಉಡುಪಿ ಜಿಲ್ಲಾ ಸರ್ಜನ್ ನೀಡಿದ ವರದಿಯ ಆಧಾರದಂತೆ ಕಾರ್ಕಳ ಸ್ಪಂದನಾ ಆಸ್ಪತ್ರೆಯ ಮೂವರು ವೈದ್ಯರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣಕ್ಕೆ ಝುಬೈದ(52) ಎಂಬವರು ಕಳೆದ ಮೇ 10ರಂದು ಕಾರ್ಕಳ ಸ್ಪಂದನಾ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಡ್ರಿಪ್ಸ್ ಹಾಕಿದ್ದರು. ಈ ವೇಳೆ ವೈದ್ಯರು ಬಂದು ಪರಿಶೀಲಿಸುವಂತೆ ಝುಬೈದ ಅವರ ಮಗಳು ಮುಬೀನಾ ಕೇಳಿಕೊಂಡರೂ ವೈದ್ಯರು ಬರಲಿಲ್ಲ, ನಂತರ ಬಂದ ಡಾ.ನಾಗರತ್ನ ಕೂಡಲೇ ಆಪರೇಷನ್ ಮಾಡಬೇಕು, ಝುಬೈದ ಅವರ ಜೀವಕ್ಕೆ ಅಪಾಯ ಇದೆ ಎಂದು ಹೇಳಿದರು.

ನಂತರ ಝುಬೈದ ಅವರನ್ನು ಆಸ್ಪತ್ರೆಯ ಆಪರೇಷನ್‌ ಥಿಯೇಟರ್‌ಗೆ ಕರೆದುಕೊಂಡು ಹೋಗಿದ್ದು, ಡಾ.ನಾಗರತ್ನ, ಡಾ.ರೆಹಮತ್ತುಲ್ಲಾ ಹಾಗೂ ಡಾ.ತುಷಾರ್‌ ಆಪರೇಷನ್ ಥಿಯೇಟರ್ ಒಳಗಡೆ ಹೋಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ಹೊರಗೆ ಬಂದ ಡಾ.ರೆಹಮತ್ತುಲ್ಲಾ, ಝುಬೈದ ಮೃತಪಟ್ಟಿರುವುದಾಗಿ ತಿಳಿಸಿದರು.

ಝುಬೈದ ಅವರಿಗೆ ವೈದ್ಯರು ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡದೆ ಹಾಗೂ ಸರಿಯಾಗಿ ಪರೀಕ್ಷೆ ಮಾಡದೆ ನಿರ್ಲಕ್ಷ್ಯದಿಂದ ಆಪರೇಷನ್ ಮಾಡಿದ್ದಾರೆ ಎಂದು ಆರೋಪಿಸಿ ಮುಬೀನಾ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಝುಬೈದ ಅವರ ಮರಣದ ಬಗ್ಗೆ ಹಾಗೂ ವೈಧ್ಯಾಧಿಕಾರಿಯವರ ನಿರ್ಲಕ್ಷ್ಯದ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಕೋರಿಕೆ ಪತ್ರ ನೀಡಿದ್ದು, ಈ ಬಗ್ಗೆ ಉಡುಪಿ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಎಚ್.ಅಶೋಕ್‌ ಪರಿಶೀಲನೆ ನಡೆಸಿ ವರದಿ ನೀಡಿದ್ದರು. ಈ ವರದಿಯಲ್ಲಿ ಆರೋಪಿ ವೈದ್ಯರಾದ ಡಾ.ನಾಗರತ್ನ, ಡಾ.ರೆಹಮತ್ತುಲ್ಲಾ ಹಾಗೂ ಡಾ.ತುಷಾರ್‌ ಆಪರೇಶನ್ ಮಾಡುವ ಮೊದಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಇರುವುದು ಮತ್ತು ಸಾಕಷ್ಟು ಕಾಲಾವಕಾಶ ಇದ್ದರೂ ರೋಗಿಯ ಸ್ಥಿತಿಗತಿಯ ಬಗ್ಗೆ ರೋಗಿಯ ಸಂಬಂಧ ಪಟ್ಟವರಿಗೆ ಮಾಹಿತಿ ನೀಡದೆ ಇರುವುದು ಕಂಡು ಬಂದಿದೆ.

ರೋಗಿ ಆಪರೇಷನ್ ಆಗುವಾಗಲೇ ಮೃತಪಟ್ಟಿರುವುದು ವೈದ್ಯಾಧಿಕಾರಿಗಳ ಲಿಖಿತ ಹೇಳಿಕೆಯಿಂದ ದೃಡಪಟ್ಟಿದೆ. ಅದರಂತೆ ಶಸ್ತ್ರ ಚಿಕಿತ್ಸೆ ನೀಡಿದ ವೈದ್ಯರ ನಿರ್ಲಕ್ಷ್ಯ ಮೇಲ್ಮೊಟಕ್ಕೆ ಕಂಡು ಬಂದಿದೆ ಎಂದು ಈ ವರದಿ ಅಭಿಪ್ರಾಯ ಪಟ್ಟಿದೆ. ಅದರಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಮೂವರು ವೈದ್ಯರ ವಿರುದ್ಧ ಪ್ರಕರಣ ಪ್ರಕರಣ ದಾಖಲಾಗಿದೆ.

About The Author

Leave a Reply