

ಸುಳ್ಯ: ಕೆಲವು ತಿಂಗಳ ಹಿಂದೆ ಸುಳ್ಯದ ಶಾಂತಿನಗರ ನಿವಾಸಿ ಆಟೋ ಚಾಲಕ ಜಬ್ಬಾರ್ ಎಂಬವರನ್ನು ಹೊಡೆದು ಹಾಕಿದ ಪರಿಣಾಮವಾಗಿ ಅವರು ಮೃತರಾಗಿದ್ದು, ಕೊಲೆಗೆ ಕಾರಣರಾದವರೆಂಬ ಆರೋಪಕ್ಕೆ ಒಳಗಾಗಿದ್ದ ರಫೀಕ್ ಪಡು ಎಂಬಾತನನ್ನು ಸುಳ್ಯ ಪೋಲೀಸರು ಬಂಧಿಸಿದ್ದಾರೆ. ಡಿ 30 ರಂದು ಆತನನ್ನು ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲವು ಆತನನ್ನು ಹೆಚ್ಚಿನ ತನಿಖೆಗಾಗಿ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಮನು ಎಂಬಾತನನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆಂಬ ಮಾಹಿತಿ ಇದೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ತನ್ನ ನಿಕಟ ಬಂಧುವಿನ ಮಗನಾದ ಶಾಲಾ ಬಾಲಕನನ್ನು ರಿಕ್ಷಾದಲ್ಲಿ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದಾನೆಂಬ ಆಕ್ರೋಶದಿಂದ ರಫೀಕ್ ಪಡು, ಆಟೋ ಚಾಲಕ ಜಬ್ಬಾರ್‌ನನ್ನು ಕಾರನಲ್ಲಿ ಕಲ್ಲುಗುಂಡಿ ಕಡೆಗೆ ಕರೆದೊಯ್ದು ಮನಸೋಯಿಚ್ಚೆ ಹಲ್ಲೆ ಮಾಡಿರುವುದಾಗಿ ಹೇಳಲಾಗಿತ್ತು.
ರಫೀಕ್ ಪಡು ಮತ್ತಿತರರ ಹಲ್ಲೆಯ ಪರಿಣಾಮವಾಗಿ ತನ್ನ ಪತಿ ಮೃತರಾಗಿದ್ದು ಅವರ ಮೇಲೆ ಕೊಲೆ ಕೇಸು ದಾಖಲಿಸಬೇಕೆಂದು ಜಬ್ಬಾರ್‌ರವರ ಪತ್ನಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಂದು ದೂರು ನೀಡಿದ್ದರು.ಆ ಸಂದರ್ಭದಲ್ಲಿ ರಫೀಕ್ ನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದ ಪೊಲೀಸರು ಮರಣೋತ್ತರ ಪರೀಕ್ಷೆ ಬಂದ ಬಳಿಕ ಠಾಣೆಗೆ ಹಾಜರಾಗುವಂತೆ ನಿಬಂಧನೆ ವಿಧಿಸಿ ಕಳುಹಿಸಿಕೊಟ್ಟಿದ್ದರು. ಅದಾದ ಬಳಿಕ ರಫೀಕ್ ಪಡು ತಲೆಮರೆಸಿಕೊಂಡಿದ್ದು ನಿರೀಕ್ಷಣಾ ಜಾಮೀನಿಗೆ ಪ್ರಯತ್ನ ನಡೆಸುತ್ತಿದ್ದರು. ಆದರೆ ಜಾಮೀನು ದೊರೆತಿರಲಿಲ್ಲ.
ಡಿ.29 ರಂದು ಪೊಲೀಸರು ಆತನನ್ನು ಬಂಧಿಸುವುದಾಗಿ ತಿಳಿದುಬಂದಿದೆ. ರಫೀಕ್ ಪಡು ಕಾರಿನಲ್ಲಿ ಜಬ್ಬಾರ್ ನನ್ನು ಕಲ್ಲುಗುಂಡಿ ಕಡೆಗೆ ಕರೆದೊಯ್ದು, ಕಲ್ಲುಗುಂಡಿಯ ಮನುವಲ್ಲಿಗೆ ಹೋಗಿ, ಅಲ್ಲಿ ಆತನೂ ಸೇರಿ ಜಬ್ಬಾರ್ ಗೆ ಹೊಡೆದಿದ್ದುದಾಗಿ ಮಾಹಿತಿ ಇರುವ ಮೇರೆಗೆ ರಫೀಕ್ ನ ವಿಚಾರಣೆಯ ಬಳಿಕ ಪೋಲೀಸರು ಮನುವನ್ನು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.






