

ಮಂಗಳೂರು: ಕೋಳಿ ಅಂಕ ಎಂಬುದು ಚರ್ಚಾರ್ಹ ವಿಷಯವೇ ಆಗಿರಬಹುದು. ಆದರೆ ಅದಕ್ಕೂ ಜಾಸ್ತಿ, ಕೋಗಿಲು ಲೇಔಟ್‌ನಲ್ಲಿ ಬೀದಿಗೆ ಬಿದ್ದ ವೃದ್ದರು, ಮಕ್ಕಳು, ಬಾಣಂತಿಯರು, ರೋಗಿಗಳ ಬದುಕು ಮುಖ್ಯವಾಗಿದೆ. ಇವರ್ಯಾರೂ ಕೋಳಿ ಅಂಕದ ಬಗ್ಗೆ ಪ್ರತಿಕ್ರಿಯಿಸುವವರ ಕಣ್ಣಿಗೆ ಬಿದ್ದಿಲ್ಲವೇ? ಅದೇ ಸಮುದಾಯದ ವೋಟ್ ಪಡೆದವರು ಈ ರೀತಿಯಾಗಿ ಸಮುದಾಯದ ಮಂದಿಯನ್ನು ಕಡೆಗಣಿಸುತ್ತಾರೆ ಅಂತಾದರೆ ಇಂತಹ ಜನಪ್ರತಿನಿಧಿಗಳು ನಮಗೆ ಬೇಕೇ ಎಂದು ದ.ಕ. ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟದ ಅಧ್ಯಕ್ಷ ಸಿರಾಜ್ ಬಜ್ಪೆ ಪ್ರಶ್ನಿಸಿದ್ದಾರೆ.
ಪಕ್ಷ ಯಾವುದೇ ಇರಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತದ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸದ ಶಾಸಕರುಗಳು ನಮಗೆ ಬೇಕಿಲ್ಲ. ಅನ್ಯಾಯ ಯಾವುದೆ ಧರ್ಮದವರಿಗೆ ಆಗಲಿ ಅದು ಅನ್ಯಾಯ ಅಲ್ಲವೇ ? ಒಬ್ಬ ಜನಪ್ರಧಿನಿಧಿ ಆದವನು ಧರ್ಮ ನೋಡದೆ ಧ್ವನಿ ಎತ್ತಬೇಕು ಅನ್ನುವಷ್ಟು ಜ್ಞಾನವಿಲ್ಲವೇ? ತನ್ನ ಸಮುದಾಯವನ್ನು ಹೇಗೆ ಬೇಕು ಹಾಗೆ ನಡೆಸಿಕೊಂಡರೆ ನಡೆಯುತ್ತದೆ ಅನ್ನುವ ಭ್ರಮೆ ಇನ್ಮುಂದೆ ಇಟ್ಟುಕೊಳ್ಳಬೇಡಿ. ಅಂತಹ ರಾಜಕೀಯ ಆಟ ಇನ್ನು ನಡೆಯುವುದಿಲ್ಲ ಅನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಸಮುದಾಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಅನ್ಯಾಯವಾದಾಗ ತುಟಿಕ್ ಪಿಟಿಕ್ ಅನ್ನದ ಇವರಿಂದ ಈ ಸಮಾಜಕ್ಕೆ ಏನು ಲಾಭವಿದೆ ಅನ್ನೋದನ್ನು ಮತದಾರರು ಅರ್ಥ ಮಾಡಿಕೊಳ್ಳಬೇಕು. ಮುಸ್ಲಿಂ ಸಮುದಾಯ ಇಂತಹ ಜನಪ್ರಧಿನಿಧಿಗಳಿಂದ ಎಚೆತ್ತುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಹಳ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸಮುದಾಯದ ವಿರುದ್ಧ ಮುಸ್ಲಿಂ ಜನಪ್ರತಿನಿಧಿಗಳ ಇದೇ ರೀತಿ ನಿರ್ಲಕ್ಷ್ಯತನ ಮುಂದುವರೆದಲ್ಲಿ ಅಂತಹ ಜನಪ್ರಧಿನಿಧಿಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟ ಪ್ರತಿಭಟಿಸಬೇಕಾಗುತ್ತದೆ ಎಂದು ಬಜ್ಪೆ ಪ.ಪಂ. ನೂತನ ಸದಸ್ಯರೂ ಆಗಿರುವ ಸಿರಾಜ್ ಬಜ್ಪೆ ಎಚ್ಚರಿಸಿದ್ದಾರೆ.






