

ಬೆಂಗಳೂರು: ಕೇರಳ ಸರ್ಕಾರ ಜಾರಿಗೆ ತರುವುದಾಗಿ ಮುಂದಾಗಿರುವ ‘ಮಲಯಾಳಿ ಭಾಷಾ ಮಸೂದೆ–2025’ ಕಾಸರಗೋಡು ಜಿಲ್ಲೆಯ ಕನ್ನಡಿಗರ ಭಾಷಾ ಹಕ್ಕುಗಳ ಮೇಲೆ ಗಂಭೀರ ಪರಿಣಾಮ ಬೀರುವಂತಿದ್ದು, ಅದನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರಳ ಸರ್ಕಾರ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸುದೀರ್ಘ ಸಂದೇಶ ಪ್ರಕಟಿಸಿರುವ ಸಿದ್ದರಾಮಯ್ಯ, ಕಾಸರಗೋಡು ಕನ್ನಡಿಗರ ಹಿತವನ್ನು ನಿರ್ಲಕ್ಷಿಸಿ ಅವರ ಮೇಲೆ ಮಲಯಾಳಂ ಭಾಷೆಯನ್ನು ಹೇರಿದರೆ, ಕರ್ನಾಟಕ ಸರ್ಕಾರ ಅವರ ಜೊತೆಗೆ ನಿಂತು ಸರ್ವ ರೀತಿಯ ಬೆಂಬಲ ನೀಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಪ್ರಸ್ತಾಪಿತ ಮಲಯಾಳಿ ಭಾಷಾ ಮಸೂದೆ–2025, ಸಂವಿಧಾನ ಖಾತರಿಪಡಿಸಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ನೇರ ದಾಳಿ ಎಂದು ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಈ ಮಸೂದೆ ಜಾರಿಗೆ ಬಂದರೆ, ವಿಶೇಷವಾಗಿ ಕಾಸರಗೋಡು ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ವಾಸಿಸುವ ಕನ್ನಡಿಗರು ತಮ್ಮ ಮಾತೃಭಾಷೆಯನ್ನು ಕಲಿಯುವ ಹಕ್ಕಿನಿಂದ ವಂಚಿತರಾಗುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.“ಆಡಳಿತಾತ್ಮಕವಾಗಿ ಕಾಸರಗೋಡು ಕೇರಳಕ್ಕೆ ಸೇರಿದ್ದರೂ, ಭಾವನಾತ್ಮಕವಾಗಿ ಅದು ಕರ್ನಾಟಕದ ಭಾಗವೇ ಆಗಿದೆ. ಅಲ್ಲಿನ ಜನ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯದೊಂದಿಗೆ ಆಳವಾಗಿ ಬೆಸೆದುಕೊಂಡಿದ್ದಾರೆ. ಅವರು ಯಾವುದೇ ರೀತಿಯಿಂದಲೂ ಕಡಿಮೆ ಕನ್ನಡಿಗರಲ್ಲ” ಎಂದು ಸಿಎಂ ಹೇಳಿದ್ದಾರೆ. ಅಲ್ಲಿನ ಕನ್ನಡಿಗರ ಹಿತ ರಕ್ಷಿಸುವುದು ಕರ್ನಾಟಕ ಸರ್ಕಾರದ ಕರ್ತವ್ಯವಾಗಿದೆ ಎಂದಿದ್ದಾರೆ.ಕೇರಳ ವಿಧಾನಸಭೆಯಲ್ಲಿ ಅಂಗೀಕೃತಗೊಂಡಿರುವ ಮಲಯಾಳಿ ಭಾಷಾ ಮಸೂದೆ–2025 ಅನ್ನು ತಕ್ಷಣ ಹಿಂಪಡೆಯಬೇಕು ಎಂದು ಪಿಣರಾಯಿ ವಿಜಯನ್ ಅವರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಮಾತೃಭಾಷೆ ಎನ್ನುವುದು ಕೇವಲ ಸಂವಹನದ ಸಾಧನವಲ್ಲ, ಅದು ಜನರ ಅಸ್ಮಿತೆ ಮತ್ತು ಘನತೆಯ ಬದುಕಿನ ಭಾಗವಾಗಿದೆ. ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳು ವಿಷಯವನ್ನು ಸುಲಭವಾಗಿ ಗ್ರಹಿಸುತ್ತಾರೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.ಸಿದ್ದರಾಮಯ್ಯ ಅವರು ಸಂವಿಧಾನದ 29 ಮತ್ತು 30ನೇ ವಿಧಿಗಳು ಭಾಷಾ ಅಲ್ಪಸಂಖ್ಯಾತರಿಗೆ ತಮ್ಮ ಭಾಷೆ, ಲಿಪಿ ಹಾಗೂ ಸಂಸ್ಕೃತಿಯನ್ನು ರಕ್ಷಿಸಿಕೊಳ್ಳುವ ಹಕ್ಕು ನೀಡುತ್ತವೆ ಎಂದು ಉಲ್ಲೇಖಿಸಿದ್ದಾರೆ. ಜೊತೆಗೆ ಸಂವಿಧಾನದ 350(ಎ) ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಹಕ್ಕನ್ನು ಮತ್ತು 350(ಬಿ) ಅಲ್ಪಸಂಖ್ಯಾತರ ರಕ್ಷಣೆಯ ಭರವಸೆಯನ್ನು ನೀಡುತ್ತದೆ ಎಂದು ನೆನಪಿಸಿದ್ದಾರೆ.ಭಾರತವು ಬಹುಭಾಷೆ, ಬಹುಸಂಸ್ಕೃತಿ ಮತ್ತು ಬಹುಧರ್ಮಗಳ ದೇಶ. ಈ ಬಹುತ್ವಕ್ಕೆ ಧಕ್ಕೆ ಉಂಟುಮಾಡುವ ಯಾವುದೇ ಪ್ರಯತ್ನ ಅಪಾಯಕಾರಿಯಾಗಿದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ನಾವು ಕನ್ನಡ ಭಾಷೆಯನ್ನು ಪೊರೆಯುವಂತೆ, ಕೇರಳದಲ್ಲಿ ಮಲಯಾಳಿ ಭಾಷೆಯನ್ನು ಬೆಳೆಸುವ ಸಂಪೂರ್ಣ ಸ್ವಾತಂತ್ರ್ಯ ಅಲ್ಲಿನ ಸರ್ಕಾರಕ್ಕಿದೆ. ಆದರೆ ಒಂದು ಭಾಷೆಯನ್ನು ಇನ್ನೊಂದು ಭಾಷೆಯ ಮೇಲೆ ಹೇರುವುದು ಸರಿಯಲ್ಲ ಎಂದಿದ್ದಾರೆ.ಕೇರಳ ಸರ್ಕಾರ ಈ ಮಸೂದೆಯನ್ನು ಜಾರಿಗೊಳಿಸಲು ಮುಂದಾದರೆ, ಕಾಸರಗೋಡು ಕನ್ನಡಿಗರು ಒಕ್ಕೊರಲಿನಿಂದ ವಿರೋಧಿಸಲಿದ್ದಾರೆ. ಅವರ ಭಾಷಾ ಸ್ವಾತಂತ್ರ್ಯ ಮತ್ತು ಹಕ್ಕುಗಳ ರಕ್ಷಣೆಗೆ ಕರ್ನಾಟಕ ಸರ್ಕಾರ ಸಂಪೂರ್ಣವಾಗಿ ಅವರ ಜೊತೆಗೆ ನಿಲ್ಲಲಿದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.






