January 16, 2026
WhatsApp Image 2026-01-09 at 3.02.52 PM

ಪಾಟ್ನಾ: ಬಿಹಾರದಾದ್ಯಂತ ಆಭರಣದ ಅಂಗಡಿಗಳಲ್ಲಿ ಹಿಜಾಬ್, ನಿಖಾಬ್, ಬುರ್ಖಾ, ಮಾಸ್ಕ್, ಹೆಲ್ಮೆಟ್ ಧರಿಸಿದ ಗ್ರಾಹಕರಿಗೆ ಪ್ರವೇಶವಿಲ್ಲ ಎಂದು ನೋಟಿಸ್ ಹಾಕಲಾಗಿದೆ. ಹಾಗೆಂದು ಇದು ಯಾವುದೇ ಧಾರ್ಮಿಕ ದ್ವೇಷದ ಕ್ರಮವಲ್ಲ.

ಮುಖ ಸಂಪೂರ್ಣವಾಗಿ ಅಥವಾ ಭಾಗಶಃ ಮುಚ್ಚಿರುವ ಗ್ರಾಹಕರಿಗೆ ಪ್ರವೇಶ ನಿರಾಕರಿಸುವ ತೀರ್ಮಾನವನ್ನು ಅಲ್ಲಿನ ಆಭರಣ ವ್ಯಾಪಾರಿಗಳು ಕೈಗೊಂಡಿದ್ದಾರೆ. ಆಭರಣ ಅಂಗಡಿಗಳಲ್ಲಿ ಕಳ್ಳತನ ಮತ್ತು ದರೋಡೆ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಠಿಯಿಂದ ಅಖಿಲ ಭಾರತ ಜುವೆಲ್ಲರ್ಸ್ ಮತ್ತು ಗೋಲ್ಡ್ ಫೆಡರೇಷನ್ ನಿರ್ದೇಶನದ ಮೇರೆಗೆ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಜನವರಿ 8ರಿಂದ ಬಿಹಾರ ರಾಜ್ಯಾದ್ಯಂತ ಈ ನಿಯಮ ಜಾರಿಗೆ ಬಂದಿದೆ. ಆಭರಣ ಅಂಗಡಿ ಮಾಲಕರು ಈಗಾಗಲೇ ತಮ್ಮ ಅಂಗಡಿಗಳ ಹೊರಗೆ “ಪ್ರವೇಶವಿಲ್ಲ” ಎಂಬ ಫಲಕಗಳನ್ನು ಹಾಕಿದ್ದಾರೆ. ಬುಧವಾರ ಪಾಟ್ನಾದ ಆಭರಣ ಅಂಗಡಿಗಳ ಹೊರಗೆ ಈ ಕುರಿತ ಪೋಸ್ಟರ್‌ಗಳು ಕಂಡು ಬಂದಿವೆ. ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗಗನಕ್ಕೇರುತ್ತಿರುವಾಗ ಆಭರಣ ಅಂಗಡಿಗಳಲ್ಲಿ ಕಳ್ಳತನ ಮತ್ತು ದರೋಡೆ ಕೃತ್ಯಗಳು ಹೆಚ್ಚುತ್ತಿವೆ.

ಗ್ರಾಹಕರ ಸೋಗಿನಲ್ಲಿ ಬುರ್ಖಾ, ಹಿಜಾಬ್‌ನಂಥ ಮುಖ ಮುಚ್ಚುವ ವಸ್ತ್ರ ಧರಿಸು ಬರುವವರು ಹಾಡಹಗಲೇ ದರೋಡೆ ಕೃತ್ಯಗಳನ್ನು ಎಸಗುತ್ತಿದ್ದು, ಮುಖ ಮುಚ್ಚುವ ಕಾರಣ ಸಿಸಿಟಿವಿ ಇದ್ದರೂ ಅವರ ಗುರುತು ಪತ್ತೆಹಚ್ಚಲು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಭರಣ ಅಂಗಡಿಗಳಲ್ಲಿ ಮುಖ ಮುಚ್ಚುವವರ ಜೊತೆ ವ್ಯಾಪಾರ ಇಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಈ ನಿರ್ಧಾರವು ಸಂಪೂರ್ಣವಾಗಿ ಆಭರಣದ ಅಂಗಡಿ, ಸಿಬ್ಬಂದಿ ಮತ್ತು ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಕೈಗೊಳ್ಳಲಾಗಿದೆ ಎಂದು ವ್ಯಾಪಾರಿಯೋರ್ವರು ಹೇಳಿದ್ದಾರೆ. ಗ್ರಾಹಕರು ತಮ್ಮ ಮಾಸ್ಕ್‌ಗಳನ್ನು ತೆರೆದ ನಂತರ ಅವರಿಗೆ ಪ್ರವೇಶವನ್ನು ಅನುಮತಿಸಲಾಗುತ್ತದೆ. ಈ ನಿರ್ಬಂಧ ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.

About The Author

Leave a Reply