

ಕಾಸರಗೋಡು ಜಿಲ್ಲೆಯ ಕನ್ನಡಿಗರು ಮತ್ತೊಮ್ಮೆ ತ್ರಿಶಂಕು ಸ್ಥಿತಿಗೆ ತಳ್ಳಲ್ಪಡುವ ಆತಂಕ ಎದುರಿಸುತ್ತಿದ್ದಾರೆ. ಕೇರಳ ಸರ್ಕಾರ ಜಾರಿಗೆ ತಂದಿರುವ ‘ಭಾಷಾ ಮಸೂದೆ – 2025’ ಗಡಿನಾಡಿನ ಕನ್ನಡಿಗರಲ್ಲಿ ಗಂಭೀರ ಚಿಂತೆ ಮತ್ತು ಅಸಮಾಧಾನವನ್ನು ಹುಟ್ಟಿಸಿದೆ. ಬಹುಭಾಷಾ ಹಾಗೂ ಬಹುಸಾಂಸ್ಕೃತಿಕ ಹಿನ್ನೆಲೆಯ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡಿಗರ ಭಾಷಾ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನ ಈ ಮಸೂದೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.
ಕನ್ನಡ ಕಲಿಯಲು ಉತ್ಸುಕರಾಗಿರುವ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದ ಸೌಲಭ್ಯವನ್ನು ವಿಸ್ತರಿಸುವ ಬದಲು, ಕನ್ನಡ ಶಾಲೆಗಳಲ್ಲೇ ಮಲಯಾಳಂ ಭಾಷೆಯನ್ನು ಕಡ್ಡಾಯವಾಗಿ ಹೇರಲಾಗುತ್ತಿರುವುದು ಅತೀವ ಆತಂಕಕಾರಿ ಸಂಗತಿಯಾಗಿದೆ. ಮತ್ತೊಂದೆಡೆ, ಮಲಯಾಳಂ ಕಲಿಯಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಮರ್ಪಕ ಮಲಯಾಳಂ ಮಾಧ್ಯಮದ ವ್ಯವಸ್ಥೆ ಕೂಡ ಒದಗಿಸಲಾಗುತ್ತಿಲ್ಲ. ಇದು ಭಾಷಾ ಸ್ವಾತಂತ್ರ್ಯಕ್ಕೂ, ಶಿಕ್ಷಣದ ಮೂಲಭೂತ ಹಕ್ಕಿಗೂ ವಿರುದ್ಧವಾದ ಕ್ರಮವಾಗಿದೆ.
ಯಾವ ಭಾಷೆಯಲ್ಲಿ ಶಿಕ್ಷಣ ಪಡೆಯಬೇಕು ಎಂಬುದು ಸಂಪೂರ್ಣವಾಗಿ ವಿದ್ಯಾರ್ಥಿಗಳು ಮತ್ತು ಪೋಷಕರ ಆಯ್ಕೆಯಾಗಬೇಕು. ಆದರೆ ‘ಕಡ್ಡಾಯ’ ಎಂಬ ಹೆಸರಿನಲ್ಲಿ ಮಸೂದೆಗಳನ್ನು ಜಾರಿಗೆ ತಂದು, ಕಾಸರಗೋಡಿನ ಕನ್ನಡಿಗರ ಭಾಷಾ ಅಸ್ತಿತ್ವವನ್ನೇ ಮಸುಕುಗೊಳಿಸುವ ಪ್ರಯತ್ನ ನಡೆಯುತ್ತಿರುವುದು ಅತ್ಯಂತ ಖಂಡನಾರ್ಹ.
ಗಡಿನಾಡಿನ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಗುರುತನ್ನು ಸಂರಕ್ಷಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಭಾಷಾ ವೈವಿಧ್ಯತೆಯನ್ನು ಗೌರವಿಸಬೇಕಾದ ಸರ್ಕಾರವೇ ಒಂದು ಭಾಷೆಯನ್ನು ಮತ್ತೊಂದು ಭಾಷೆಯ ಮೇಲೆ ಹೇರಲು ಮುಂದಾಗಿರುವುದು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಸಂಪೂರ್ಣ ವಿರುದ್ಧವಾಗಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಧ್ಯ ಪ್ರವೇಶಿಸಿ, ಕೇರಳ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಈ ಮಸೂದೆಯನ್ನು ಹಿಂಪಡೆಯುವಂತೆ ಕೇರಳ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಬೇಕು. ಜೊತೆಗೆ, ಭಾಷಾ ಅಲ್ಪಸಂಖ್ಯಾತ ಪ್ರದೇಶವಾಗಿರುವ ಕಾಸರಗೋಡಿನ ಕನ್ನಡಿಗರನ್ನು ಈ ಮಸೂದೆಯಿಂದ ಹೊರಗಿಡುವಂತೆ ಮಾನ್ಯ ರಾಷ್ಟ್ರಪತಿ ಅವರ ಗಮನಕ್ಕೂ ಈ ವಿಷಯವನ್ನು ತರಬೇಕೆಂದು ಈ ಮೂಲಕ ಬಲವಾಗಿ ಆಗ್ರಹಿಸುತ್ತೆನೆ






