

ತಿರುವನಂತಪುರ: ಪ್ರಸಿದ್ಧ ಕೇರಳದ ಶಬರಿಮಲೆ ಯಲ್ಲಿ ಮಕರ ಜ್ಯೋತಿ ದರ್ಶನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಶಬರಿಮಲೆ ‘ಅಯ್ಯಪ್ಪ ಸ್ವಾಮಿ ದೇವರ’ ದರ್ಶನಕ್ಕೆ ವಿವಿಧ ರಾಜ್ಯಗಳ ಲಕ್ಷಾಂತರ ಭಕ್ತರು, ಆಗಮಿಸುತ್ತಿದ್ದು, ಮಕರ ಸಂಕ್ರಾಂತಿ ದಿನದಂದು ಕಾಣುವ ‘ಜ್ಯೋತಿ’ ದರ್ಶನ ಪಡೆದು ಪುನೀತರಾಗಲಿದ್ದಾರೆ. ಈ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ.
ಮಕರ ಜ್ಯೋತಿ (ಮಕರವಿಳಕ್ಕು) ದರ್ಶನಕ್ಕಾಗಿ ಶಬರಿಮಲೆಗೆ ಈಗಾಗಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಈ ಸಂಬಂಧ ವಿಶೇಷ ಸಾರಿಗೆ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ಹಾಗೂ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಶಬರಿಮಲೆಯಲ್ಲಿ ಜ್ಯೋತಿ ದರ್ಶನದ ಸಮಯ ಅತ್ಯಧಿಕ ಜನದಟ್ಟಣೆ ಉಂಟಾಗಲಿದೆ.ಈ ಸಂಬಂಧ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಭಕ್ತರಿಗೆ ವಿಶೇಷವಾಗಿ 1,000 ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಭದ್ರತೆ ಹೆಚ್ಚಿಸಲಾಗಿದೆ. ವಾರ್ಷಿಕ ಮಕರವಿಳಕ್ಕು ಹಬ್ಬದ ದಟ್ಟಣೆ ಗಮನಿಸಿ ತಿರುವಾಂಕೂರು ದೇವಸ್ವಂ ಮಂಡಳಿಯು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ.








