

ಪುತ್ತೂರು : ಗ್ಯಾಸ್ ಬಲೂನ್ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಾರೊಂದು ಸುಟ್ಟು ಭಸ್ಮವಾದ ಘಟನೆ ಶ್ರೀ ಪೂಮಾಣಿ-ಕಿನ್ನಿಮಾನಿ ಬಳಿಯ ಪಡುಮಲೆ ಹಾಗೂ ಬಡಗನ್ನೂರು ಗ್ರಾಮ ಪಂಚಾಯತ್‌ನ ಮೈಂದಿನಡ್ಕ ವ್ಯಾಘ್ರ ಚಾಮುಂಡಿ ದೈವಸ್ಥಾನದ ಬಳಿಯ ಪಡುಮಲೆಯಲ್ಲಿ ಭಾನುವಾರ ನಡೆದಿದೆ.
ದೈವಸ್ಥಾನ ಜಾತ್ರಾ ಮಹೋತ್ಸವ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದೇವಾಲಯದ ಆವರಣದಲ್ಲಿರುವ ವಿದ್ಯುತ್ ಕಂಬದ ಬಳಿ ಕಾರು ಪಾರ್ಕಿಂಗ್ ಮಾಡಲಾಗಿತ್ತು. ಆ ಸಮಯದಲ್ಲಿ, ಹತ್ತಿರದ ಜಾತ್ರೆಯಿಂದ ಬಂದ ಗ್ಯಾಸ್ ಬಲೂನ್ ಗಾಳಿಯ ರಭಸಕ್ಕೆ ಹಾರಿ ವಿದ್ಯುತ್ ತಂತಿಗೆ ತಗುಲಿತು ಎಂದು ವರದಿಯಾಗಿದೆ.
ಬಲೂನ್ ವಿದ್ಯುತ್ ತಂತಿಗೆ ತಗುಲಿದ ತಕ್ಷಣ, ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಕಿಡಿಗಳು ಹಾರಿ, ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದ ಕಾರಿಗೆ ತಗುಲಿದೆ. ಕೆಲವೇ ಕ್ಷಣಗಳಲ್ಲಿ, ಕಾರು ಬೆಂಕಿಗಾಹುತಿಯಾಗಿದೆ. ಜ್ವಾಲೆಯ ಮಧ್ಯೆ, ಕಾರು ಇದ್ದಕ್ಕಿದ್ದಂತೆ ಮುಂದೆ ಸಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ಸಮಯದಲ್ಲಿ, ಕಿಡಿಗಳು ಕಾರಿಗೆ ತಗುಲಿ ಹೊತ್ತಿ ಉರಿದಿದೆ.
ಸ್ಥಳೀಯ ನಿವಾಸಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಘಟನೆಯಲ್ಲಿ ಕಾರು ಭಾಗಶಃ ಸುಟ್ಟುಹೋಗಿತ್ತು. ಅದೃಷ್ಟವಶಾತ್, ಯಾವುದೇ ಜೀವಹಾನಿ ಸಂಭವಿಸಿಲ್ಲ.






