

ಬೆಳ್ತಂಗಡಿ: ವಾಹನ ಖರೀದಿಗೆ ಬ್ಯಾಂಕ್ ಆಫ್ ಬರೋಡದಿಂದ ತೆಗೆದ ಲಕ್ಷಾಂತರ ರೂ. ಸಾಲವನ್ನು ಕಟ್ಟದೆ ವಂಚಿಸಿದ ಘಟನೆ ನಡೆದಿದೆ. ಬ್ಯಾಂಕ್ ಮುಖ್ಯಸ್ಥರ ಫೋರ್ಜರಿ ಸಹಿಯನ್ನು ಲೆಟರ್ ಹೆಸ್ ನಲ್ಲಿ ಬಳಸಿ ಸಾಲ ಸಂಪೂರ್ಣ ಸಂದಾಯವಾಗಿರುವುದಾಗಿ ಸುಳ್ಳು ಪತ್ರವನ್ನು ಆರ್.ಟಿ.ಒ.ಕಚೇರಿಗೆ ನೀಡಿರುವುದರ ಕುರಿತು ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ನಿವಾಸಿಗಳಾದ ತನ್ವಿರ್ ಹಾಗೂ ಅವರ ತಾಯಿ ನೆಬಿಶಾ ಮತ್ತು ಜುನೈದ್ ಮೆಲ್ಕಾರ್ ಹಾಗೂ ರಮೀಝ್ ಆಲಿಶ್ ಉಪ್ಪಿನಂಗಡಿ ಅವರ ಮೇಲೆ ದೂರು ದಾಖಲಾಗಿದೆ. ತನ್ವೀರ್ ಅವರು ಅಶೋಕ್ ಲೈಲಾಂಡ್ ಕಂಪೆನಿಯ ಲಾರಿ ಪಡೆದುಕೊಳ್ಳಲು 2023 ಮಾ.16 ರಂದು ಬ್ಯಾಂಕ್ ಆಫ್ ಬರೋಡದ ಉಪ್ಪಿನಂಗಡಿ ಶಾಖೆಯಿಂದ ತಾಯಿ ನೆಬಿಶಾ ರವರು ನೀಡಿದ ಜಾಮೀನು ಮೇಲೆ 45 ಲಕ್ಷ ರೂ ಸಾಲವನ್ನು ಪಡೆದಿದ್ದರು. ಈ ವಾಹನವನ್ನು ಆರೋಪಿ ತನ್ವೀರ್ ಅವರು 2024 ರ ಆ.22 ರಂದು ಜುನೈದ್ ಮೆಲ್ಕಾರ್ ರವರಿಗೆ ಜಿಪಿಎ ( ಜನರಲ್ ಫವರ್ ಅಫ್ ಎಟರ್ನಿ) ಯ ಮೂಲಕ ವಾಹನದ ಜವಾಬ್ದಾರಿ ನೀಡಿದ್ದಾರೆ.
2024 ರ ಡಿ.16 ರಂದು ತನ್ವೀರ್ ಅವರು ಬ್ಯಾಂಕಿನ ಅಧಿಕಾರಿಯ ಫೋರ್ಜರಿ ಸಹಿಯನ್ನು ಬ್ಯಾಂಕಿನ ಲೆಟರ್ ಹೆಡ್ ನ ಅಡಿಯಲ್ಲಿ ತಯಾರಿಸಿ ಅದರಲ್ಲಿ ಬ್ಯಾಂಕ್ ಆಫ್ ಬರೋಡ ಉಪ್ಪಿನಂಗಡಿ ಶಾಖೆಯಲ್ಲಿರುವ ವಾಹನದ ಸಾಲ ಸಂಪೂರ್ಣ ಸಂದಾಯವಾಗಿರುತ್ತದೆ ಮತ್ತು ಪತ್ರದ ಆಧಾರದಲ್ಲಿ ಆರ್.ಟಿ.ಒ.ಬಂಟ್ವಾಳ ಕಚೇರಿಯಲ್ಲಿ ಋಣಭಾರವನ್ನು ತೆಗೆದು ಹಾಕಬಹುದು ಎಂಬ ದೃಡಪತ್ರವನ್ನು ಬ್ಯಾಂಕ್ ಗೆ ವಂಚಿಸಿ, ಬಂಟ್ವಾಳದ ಅರ್.ಟಿ.ಒ. ಗೆ ನೀಡಿದ್ದಾರೆ.
ಆರ್.ಟಿ.ಒ.ಬಂಟ್ವಾಳ ಕಚೇರಿಯಿಂದ ಸಿಕ್ಕಿದ ನಿರಪೇಕ್ಷಣಾ ಪತ್ರ ಪಡೆದ ಆಧಾರದಂತೆ ರಮೀಝ್ ಆಲಿಶ್ ಅವರು ಪೂರ್ವನಿರ್ಧರಿತ ಷಡ್ಯಂತ್ರವನ್ನು ಮಾಡಿ ಇವರ ಹೆಸರಿಗೆ ಲಾರಿಯನ್ನು ವರ್ಗಾವಣೆಯನ್ನು ಮಾಡಿಕೊಂಡಿರುತ್ತಾರೆ. ಈ ಎಲ್ಲಾ ವಂಚನೆಯನ್ನು ನಾಲ್ವರು ಸೇರಿ ಮಾಡಿರುವ ಕಾರಣಕ್ಕಾಗಿ ನಾಲ್ವರ ವಿರುದ್ಧವೂ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ವಂಚನೆ ಪ್ರಕರಣ ದಾಖಲಿಸಲಾಗಿದ್ದು, ಪೋಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.






