

ತಂದೆಯೊಂದಿಗೆ ಉಂಟಾದ ತೀವ್ರ ಜಗಳದ ಹಿನ್ನೆಲೆಯಲ್ಲಿ ಬಾಲಕನೊಬ್ಬ ತಂದೆಗೆ ಚೂರಿಯಿಂದ ಇರಿದು, ಬಳಿಕ ಮನೆಯಲ್ಲಿದ್ದ ಕೋವಿಯಿಂದ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡ ದುರ್ಘಟನೆ ರಾಮಕುಂಜ ಸಮೀಪದ ಪಾದೆ ಪ್ರದೇಶದಲ್ಲಿ ನಡೆದಿದೆ.
ರಾಮಕುಂಜ ಗ್ರಾಮದ ಪಾದೆ ನಿವಾಸಿ ವಸಂತ ಅಮೀನ್ ಅವರ ಪುತ್ರ ಮೋಕ್ಷ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಜ.24ರ ಸಂಜೆ ಈ ಘಟನೆ ನಡೆದಿದ್ದು, ಯಾವುದೋ ಕಾರಣಕ್ಕೆ ತಂದೆ–ಮಗನ ನಡುವೆ ವಾಗ್ವಾದ ಉಂಟಾಗಿ, ಕೋಪದಾವೇಶದಲ್ಲಿ ಮೋಕ್ಷ ತಂದೆಗೆ ಚೂರಿಯಿಂದ ಇರಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಥಮಿಕ ವರದಿಗಳು ತಿಳಿಸಿವೆ.
ಗಂಭೀರವಾಗಿ ಗಾಯಗೊಂಡಿರುವ ವಸಂತ ಅಮೀನ್ ಅವರನ್ನು ತಕ್ಷಣ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಕೇರಳ ಮೂಲದವರಾದ ವಸಂತ ಅಮೀನ್ ಅವರು ರಾಮಕುಂಜದ ಪಾದೆ ಪ್ರದೇಶದಲ್ಲಿ ಜಾಗ ಖರೀದಿಸಿ ಮನೆ ನಿರ್ಮಿಸಿಕೊಂಡು ಮಗನೊಂದಿಗೆ ವಾಸವಾಗಿದ್ದರು. ಮೃತ ಮೋಕ್ಷ ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿ ಎನ್ನಲಾಗಿದೆ.
ಈ ಕೃತ್ಯಕ್ಕೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ






