

“ಕರಾವಳಿ ಭಾಗದ ಬ್ಯಾರಿ ಸಮುದಾಯವರು ಉದ್ಯೋಗ, ವ್ಯಾಪಾರ, ಶಿಕ್ಷಣ ಸೇರಿದಂತೆ ಹಲವು ಕಾರಣಕ್ಕಾಗಿ ಬೆಂಗಳೂರಿನಲ್ಲಿ ಬಂದು ನೆಲೆಸಿದ್ದಾರೆ. ಬ್ಯಾರಿ ಸಮುದಾಯದ ಎಲ್ಲರನ್ನೂ ಒಂದೇ ವೇದಿಕೆಯಡಿ ಒಟ್ಟುಗೂಡಿಸುವ ಉದ್ದೇಶದಿಂದ ಕಳೆದ ಹಲವು ವರ್ಷಗಳ ಪ್ರಯತ್ನದ ಭಾಗವಾಗಿ ‘ಬ್ಯಾರಿಸ್ ಸೆಂಟ್ರಲ್ ಕಮಿಟಿ’ ಎಂಬ ಸಂಸ್ಥೆಯನ್ನು ಯುವಕರೇ ಹುಟ್ಟು ಹಾಕಿದ್ದು, ಸಮುದಾಯದ ನೋವು-ನಲಿವುಗಳಿಗೆ ಸ್ಪಂದಿಸುತ್ತಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಎಲ್ಲ ಬ್ಯಾರಿ ಸಮುದಾಯದ ಜನರನ್ನು ಒಂದುಗೂಡಿಸಿ ಪ್ರತಿ ವರ್ಷ ‘ಬ್ಯಾರಿ ಕೂಟ’ವನ್ನು ಯಶಸ್ವಿಯಾಗಿ ಆಯೋಜಿಸುತ್ತಿದೆ. 2026ರ ಬ್ಯಾರಿ ಕೂಟವನ್ನು 2026ರ ಫೆಬ್ರವರಿ 1ರ ಭಾನುವಾರದಂದು ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂಬರ್ 8ರಲ್ಲಿರುವ ಶೃಂಗಾರ್ ಪ್ಯಾಲೇಸ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದೆ” ಎಂದು ಬೆಂಗಳೂರು ಬ್ಯಾರಿಸ್ ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಶಬೀರ್ ಬ್ರಿಗೇಡ್ ತಿಳಿಸಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬ್ಯಾರಿ ಕೂಟ-2026’ ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿ ವೇತನ ವಿತರಣೆ, ಆಂಬ್ಯುಲೆನ್ಸ್ ಲೋಕಾರ್ಪಣೆ ನಡೆಯಲಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಬ್ಯಾರಿ ಸಮುದಾಯದ ಮಕ್ಕಳು, ಮಹಿಳೆಯರು, ಯುವಕರಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಳೆದ ವರ್ಷವೂ ಕೂಡ ಶೃಂಗಾರ್ ಪ್ಯಾಲೇಸ್ ಮೈದಾನದಲ್ಲಿ ‘ಬ್ಯಾರಿ ಕೂಟ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಾವಿರಾರು ಮಂದಿ ಆಗಮಿಸುವ ಮೂಲಕ ಯಶಸ್ವಿಗೊಳಿಸಿದ್ದರು. ಈ ಬಾರಿಯ ಬ್ಯಾರಿ ಕೂಟದ ವಿಶೇಷತೆಯಾಗಿ ಇಂಪೀರಿಯೋ ಗ್ರೂಪ್ ಆಫ್ ಹೋಟೆಲ್ ಸಂಸ್ಥೆಯ ಮಾಲೀಕರಾದ ಇಬ್ರಾಹೀಂ ಖಲೀಲ್ ಹಾಗೂ ರಶೀದ್ ಇವರ ಸಹಕಾರದೊಂದಿಗೆ ಒಂದು ಆ್ಯಂಬ್ಯುಲೆನ್ಸ್ ಲೋಕಾರ್ಪಣೆ ಮಾಡಲಿದ್ದೇವೆ. ಜೊತೆಗೆ ದಾನಿಗಳಾದ ಉದ್ಯಮಿ, ಭಾರತ್ ಕನ್ಸ್‌ಟ್ರಕ್ಷನ್ ಇದರ ಮಾಲೀಕರಾದ ಮುಸ್ತಫಾ ಅವರ ಸಹಕಾರದಿಂದ ಪ್ರೊಫೆಶನಲ್ ಕೋರ್ಸ್ ಕಲಿಯುತ್ತಿರುವ ಬ್ಯಾರಿ ಸಮುದಾಯದ ಬಡ ಹಾಗೂ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 10ರಿಂದ 15 ಲಕ್ಷ ರೂಪಾಯಿಗಳ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು. ಅದರ ಜೊತೆಗೆ, ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಇದರ ನೂತನ ವೆಬ್ ಸೈಟ್ ಅನ್ನು ಕೂಡ ಬ್ಯಾರಿ ಕೂಟದಲ್ಲಿ ಲೋಕಾರ್ಪಣೆ ಮಾಡುವುದಕ್ಕೆ ಉದ್ದೇಶಿಸಿದ್ದೇವೆ ಎಂದು ತಿಳಿಸಿದರು.
ನಮ್ಮ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಉಮರ್ ಯು ಹೆಚ್, ಶಾಸಕರಾದ ರಿಝ್ವಾನ್ ಅರ್ಷದ್, ಸಚಿವರಾದ ಜಮೀರ್ ಅಹ್ಮದ್ ಖಾನ್, ಬ್ಯಾರಿ ಸಮುದಾಯದ ವಿವಿಧ ಉದ್ಯಮಿಗಳು ಸೇರಿದಂತೆ ಗಣ್ಯರನ್ನು ಆಹ್ವಾನಿಸಿದ್ದೇವೆ. ಎಲ್ಲರೂ ಆಗಮಿಸುವುದಾಗಿ ತಿಳಿಸಿದ್ದಾರೆ ಎಂದು ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಅಧ್ಯಕ್ಷರಾದ ಶಬೀರ್ ಬ್ರಿಗೇಡ್ ತಿಳಿಸಿದ್ದಾರೆ.
“ಬ್ಯಾರಿ ಕೂಟ ಭಾಗವಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಬ್ಯಾರಿ ಮಹಿಳೆಯರು, ಯುವಕ-ಯುವತಿಯರು, ಮಕ್ಕಳಿಗೆ ವಿವಿಧ ಸ್ಪರ್ಧೆಗಳ ಜೊತೆಗೆ ಬ್ಯಾರಿ ಕವಿಗೋಷ್ಠಿ ಸೇರಿದಂತೆ ಬ್ಯಾರಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬ್ಯಾರಿ ಒಪ್ಪನೆ ಪಾಟ್, ಬ್ಯಾರಿ ಕಲೆ ಬಿಂಬಿಸುವ ಎಕ್ಸ್ಪೋ, ಕರಾವಳಿಯ ತಿಂಡಿ-ತಿನಿಸುಗಳ ಆಹಾರ ಮಳಿಗೆ ಕೂಡ ಇರಲಿದೆ. ಜೊತೆಗೆ, ಯುವ ಉದ್ಯಮಿಗಳಿಗಾಗಿ ಯಶಸ್ವಿ ಉದ್ಯಮಿಗಳಿಂದ ತರಬೇತಿ ನೀಡುವ ಉದ್ದೇಶದಿಂದ ಬಿಝ್ ಟೆಕ್ ಸಮಾವೇಶ, ಮಹಿಳೆಯರಿಗೆ ಮದರಂಗಿ ಸ್ಪರ್ಧೆ, ಕುಕ್ಕಿಂಗ್ ವಿದೌಡ್ ಫೈಯರ್, ಕ್ಯಾಲಿಗ್ರಫಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಮಕ್ಕಳಿಗೆ ಛದ್ಮವೇಷ(ಫ್ಯಾನ್ಸಿ ಡ್ರೆಸ್) ಸ್ಪರ್ಧೆ, ಶಾರ್ಟ್ ಫಿಲ್ಮ್, ಕ್ಲೇ ಮಾಡೆಲಿಂಗ್, ಲಿಟಲ್ ಸ್ಟಾರ್ಸ್ ಎಂಜಿನಿಯರಿಂಗ್ ಮೈಂಡ್ಸ್ ಎಂಬ ವಿಶೇಷ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದೆವು. ಈಗಾಗಲೇ ಬ್ಯಾರಿ ಸಮುದಾಯದ ಹಲವು ಮಂದಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಮುಖಂಡರಾದ ಅಡ್ವೊಕೇಟ್ ಕಲಂದರ್ ಕೊಯಿಲ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ನಾಸಿರ್ ಕೆಂಪಿ, ಉಪಾಧ್ಯಕ್ಷರಾದ ಗಫೂರ್, ಮುಖಂಡರಾದ ಸವಾದ್ ಆರ್ ಟಿ ನಗರ, ಸಂಶುದ್ದೀನ್ ಕುಕ್ಕಾಜೆ, ರಿಫಾಯಿ, ಮಾಧ್ಯಮ ಕಾರ್ಯದರ್ಶಿ ಬಶೀರ್ ಅಡ್ಯನಡ್ಕ, ಹಾರಿಸ್ ಬೆಳ್ಮ, ಆಸಿಫ್ ಡಿಫೈನ್, ಸಾಲಿತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.






