January 31, 2026
WhatsApp Image 2026-01-30 at 11.17.25 AM

ಜೈಪುರ: ರಾಜಸ್ಥಾನದ ಜೋಧ್‌ಪುರದ ಬೋರನಾಡ ಆಶ್ರಮದ ಖ್ಯಾತ ಧಾರ್ಮಿಕ ಪ್ರಚಾರಕಿ ಪ್ರೇಮ್ ಬೈಸಾ ಅವರು ಕುಸಿದುಬಿದ್ದು ನಿಗೂಢವಾಗಿ ಮೃತಪಟ್ಟಿದ್ದಾರೆ.

ಪ್ರೇಮ್ ಬೈಸಾ ಅವರು ಮೃತಪಟ್ಟಿರುವುದು ಸಂತ ಸಮುದಾಯ ಮತ್ತು ಅವರ ಅನುಯಾಯಿಗಳಿಗೆ ಆಘಾತ ನೀಡಿದೆ.

ಸಾಧ್ವಿ ಪ್ರೇಮ್ ಬೈಸಾ (25) ಅವರು ಬುಧವಾರ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದು, ಅವರ ಸಾವಿನ ನಾಲ್ಕು ಗಂಟೆಗಳ ನಂತರ ಅವರ ಸೋಶಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ನ್ಯಾಯಕ್ಕಾಗಿ ಒತ್ತಾಯಿಸುವ ಪೋಸ್ಟ್ ಪ್ರಕರಣವನ್ನು ಇನ್ನಷ್ಟು ಜಟಿಲಗೊಳಿಸಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ನಿನ್ನೆ ಸಂಜೆ ಕುಸಿದು ಬಿದ್ದ ಸಾಧ್ವಿ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ನಿನ್ನೆ ಸಂಜೆ ಸುಮಾರು 6 ಗಂಟೆಗೆ ಸಾಧ್ವಿಯನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು. ವೈದ್ಯರು ಪರೀಕ್ಷಿಸಿದ ನಂತರ ಆಕೆ ಮೃತಪಟ್ಟಿದ್ದಾಳೆ. ಸಾವಿನ ಕಾರಣವನ್ನು ಖಚಿತಪಡಿಸಿಕೊಳ್ಳಲು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಸಾಧ್ವಿ ಜ್ವರದಿಂದ ಬಳಲುತ್ತಿದ್ದರು ಮತ್ತು ಆಶ್ರಮದಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆಶ್ರಮಕ್ಕೆ ಕರೆಸಲಾಗಿದ್ದ ಕಾಂಪೌಂಡರ್ ನೀಡಿದ ಇಂಜೆಕ್ಷನ್ ನಂತರ ಆಕೆ ಕುಸಿದು ಬಿದ್ದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆಶ್ರಮದಲ್ಲೇ ಆಕೆಗೆ ಔಷಧೋಪಚಾರ ನೀಡಲಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸುದ್ದಿ ಆಶ್ರಮದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗೆ ಕಾರಣವಾಗಿದೆ. ಸಾವಿರಾರು ಭಕ್ತರು ಜಮಾಯಿಸಿ, ನ್ಯಾಯಯುತ ಮತ್ತು ಪಾರದರ್ಶಕ ತನಿಖೆಗೆ ಆಗ್ರಹಿಸಿದ್ದಾರೆ.

ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್:

ಸಾಧ್ವಿ ಮೃತಪಟ್ಟ ಕೆಲವು ಗಂಟೆಗಳ ನಂತರ ಸಾಧ್ವಿಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಪೋಸ್ಟ್ ಕಾಣಿಸಿಕೊಂಡಿದ್ದು, ಇದು ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೊಲೀಸರ ಪ್ರಕಾರ, ಈ ಪೋಸ್ಟ್ ಒಂದು ಆತ್ಮಹತ್ಯೆಯ ಪತ್ರವಾಗಿದ್ದು, ಅದರಲ್ಲಿ ಅವರು “ಅಗ್ನಿಪರೀಕ್ಷೆ”ಯ ಬಗ್ಗೆ ಉಲ್ಲೇಖಿಸಿದ್ದಾರೆ. ತನಗೆ ಆ ಅವಕಾಶ ಸಿಗಲಿಲ್ಲ ಎಂದು ಹೇಳಿಕೊಂಡಿರುವ ಆಕೆ, ತಾನು ಮರಣ ಹೊಂದಿದ ನಂತರವಾದರೂ ನ್ಯಾಯ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ವಿಡಿಯೋ ವೈರಲ್:ಕಳೆದ ವರ್ಷ ಜುಲೈನಲ್ಲಿ ತನ್ನ ಗುರು ಹಾಗೂ ತಂದೆಗೆ ಸಮಾನವಾದ ಸ್ವಾಮೀಜಿಯನ್ನು ತಬ್ಬಿಕೊಂಡು, ಮುತ್ತುಕೊಡುತ್ತಿರುವ ವಿಡಿಯೋ ವೈರಲ್‌ ಆಗಿತ್ತು. ಈ ವಿಡಿಯೋ ಹೊರಬಂದ ಬಳಿಕ ಸಾಧ್ವಿಗೆ ಪ್ರತಿದಿನ ಚಿತ್ರಹಿಂಸೆ ನೀಡಲಾಗುತ್ತಿತ್ತು ಎನ್ನಲಾಗಿದೆ. ಈ ಸಂಬಂಧ ಪ್ರಕರಣವನ್ನೂ ದಾಖಲಿಸಲಾಯಿತು. ನಂತರ ಸಾಧ್ವಿ ತನ್ನ ಮುಗ್ಧತೆಯನ್ನು ಸಾಬೀತುಪಡಿಸಲು ಯಾವುದೇ ಕಠಿಣ ಪರೀಕ್ಷೆಗೆ ಒಳಗಾಗಲು ಸಿದ್ಧನಿದ್ದೇನೆ ಎಂದು ಸಾರ್ವಜನಿಕವಾಗಿ ಹೇಳಿದ್ದರು.

About The Author

Leave a Reply