February 5, 2026
WhatsApp Image 2026-02-05 at 2.31.32 PM

ಕಳೆದ 2019ರಲ್ಲಿ ಉತ್ತರಕನ್ನಡ ಇಲ್ಲಿನ ಕಸ್ತೂರಬಾ ನಗರದಲ್ಲಿ ನಡೆದಿದ್ದ ಬಿಜೆಪಿ ಮುಖಂಡನ ಕೊಲೆ ಯತ್ನ ಹಾಗೂ ಎಸ್‌ಡಿಪಿಐ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಡಿಪಿಐ ಕಾರ್ಯಕರ್ತರಾಗಿದ್ದ ಆರು ಮಂದಿ ಆರೋಪಿಗಳಿಗೆ ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕಿರಣ ಕಿಣಿ ಅವರು, ಆರು ಮಂದಿ ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿ 10 ವರ್ಷಗಳ ಶಿಕ್ಷೆ ವಿಧಿಸಿದರು. ​ಮೊಹಮ್ಮದ್ ಫಾರೂಕ್ (32) ಮೊಹಮ್ಮದ್ ಸಲೀಂ (36), ​ಸರ್ಫರಾಜ್ ಪಟೇಲ್ (35), ಮಹಮದ್ ಆರಿಫ್ (34), ​ನಿಸಾರ್ ಅಹಮದ್ ಶೇಖ್ (29) ಹಾಗೂ ​ಮೊಸಿನ್ ಅಬ್ದುಲ್ ಶೂಖರ್ (39) ಶಿಕ್ಷೆಗೆ ಒಳಗಾದವರು ಎಂದು ತಿಳಿದುಬಂದಿದೆ.

​ನ್ಯಾಯಾಲಯವು ಶಿಕ್ಷೆಯ ಜೊತೆಗೆ ಪ್ರತಿಯೊಬ್ಬ ಆರೋಪಿಗೆ 18 ಸಾವಿರ ರೂ. ದಂಡ ವಿಧಿಸಿದೆ. ಅಲ್ಲದೇ, ಗಾಯಾಳು ಅನೀಶ್ ತಹಶೀಲ್ದಾರ್ ಅವರಿಗೆ ಒಟ್ಟು 60 ಸಾವಿರ ರೂ. ಹಾಗೂ ಮೃತ ಅಸ್ಲಂ ಸೈಯದ್ ಅವರ ತಾಯಿಗೆ 50 ಸಾವಿರ ರೂ. ಪರಿಹಾರ ಧನ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

2019ರ ಏಪ್ರಿಲ್ 23ರಂದು ರಾತ್ರಿ ಕಸ್ತೂರಬಾ ನಗರದ ಕರಿಗುಂಡಿ ರಸ್ತೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಂದಿನ ಅಧ್ಯಕ್ಷ ಅನೀಶ್ ತಹಶೀಲ್ದಾರ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿ ದಾಳಿ ನಡೆಸಲಾಗಿತ್ತು. ಈ ಸಂಘರ್ಷದಲ್ಲಿ ಅನೀಶ್ ಅವರು ಗಾಯಗೊಂಡು ಪಾರಾಗಿದ್ದರು.

ಇದೇ ವೇಳೆ ಎಸ್‌ಡಿಪಿಐ ಕಾರ್ಯಕರ್ತ ಅಸ್ಲಂ ಸೈಯದ್ ಬಾಬಾಜಾನ್ ಎಂಬವರು ಹತ್ಯೆಗೀಡಾಗಿದ್ದರು. ಈ ಬಗ್ಗೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.

About The Author

Leave a Reply