February 6, 2026
WhatsApp Image 2026-02-06 at 9.26.10 AM

ಮಂಜೇಶ್ವರ: ಕುಂಬಳೆ ಆರಿಕ್ಕಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಕ್ರಮ ಟೋಲ್ ಬೂತ್ ತೆರವುಗೊಳಿಸಿರುವ ನಿರ್ಧಾರವು ಸಮಸ್ತ ಸಾರ್ವಜನಿಕರ ಮತ್ತು ವಿವಿಧ ಸಂಘಟನೆಗಳ ಕಾನೂನು ಹೋರಾಟಕ್ಕೆ ಸಂದ ಜಯವೇ ಹೊರತು, ಇದರಲ್ಲಿ ಬಿಜೆಪಿಯ ಪಾತ್ರವೇನೂ ಇಲ್ಲ ಎಂದು ಪಿಡಿಪಿ ಮುಖಂಡ ಎಸ್.ಎಂ. ಬಷೀರ್ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು,

“ಆರಿಕ್ಕಾಡಿ ಟೋಲ್ ವಿರುದ್ಧ ಸರ್ವಪಕ್ಷಗಳ ಕ್ರಿಯಾ ಸಮಿತಿ ಹಾಗೂ ಸಾಮಾಜಿಕ ಸಂಘಟನೆಗಳು ಹಗಲಿರುಳು ಬೀದಿಯಲ್ಲಿ ನಿಂತು ಹೋರಾಟ ಮಾಡುವಾಗ ಮೌನ ವಹಿಸಿದ್ದ ಬಿಜೆಪಿ ನಾಯಕರು, ಈಗ ಅದರ ಶ್ರೇಯಸ್ಸು ಪಡೆಯಲು ಮುಂದಾಗಿರುವುದು ಹಾಸ್ಯಾಸ್ಪದ” ಎಂದು ಟೀಕಿಸಿದರು. ಹೋರಾಟದ ಸಮಯದಲ್ಲಿ ಬಿಜೆಪಿ ಎಲ್ಲಿತ್ತು.? 

“ಜನರ ತೀವ್ರ ಪ್ರತಿಭಟನೆಗೆ ಮಣಿದು ಅಧಿಕಾರಿಗಳು ಟೋಲ್ ಸಂಗ್ರಹ ಕೈಬಿಟ್ಟಾಗ, ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅವರು ಇದರ ಕ್ರೆಡಿಟ್ ಪಡೆಯುತ್ತಿರುವುದು ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡುತ್ತಿರುವ ರಾಜಕೀಯ ನಾಟಕ. ಹೋರಾಟದ ಕಣದಿಂದ ಓಡಿಹೋದವರು ಈಗ ವಿಜಯೋತ್ಸವ ಆಚರಿಸುತ್ತಿದ್ದಾರೆ” ಎಂದು ಬಷೀರ್ ವ್ಯಂಗ್ಯವಾಡಿದರು. ತಲಪ್ಪಾಡಿ ಟೋಲ್ ತಾರತಮ್ಯದ ಪ್ರಶ್ನೆ: ಬಿಜೆಪಿ ನಾಯಕರ ಹಸ್ತಕ್ಷೇಪದಿಂದಲೇ ಟೋಲ್ ಮುಕ್ತಿಯಾಗಿದೆ ಎಂಬ ವಾದ ನಿಜವಾಗಿದ್ದರೆ, ಈ ಕೆಳಗಿನ ಪ್ರಶ್ನೆಗಳಿಗೆ ಅವರು ಉತ್ತರಿಸಲಿ ಎಂದು ಬಷೀರ್ ಸವಾಲು ಹಾಕಿದ್ದಾರೆ:

ಮಂಜೇಶ್ವರಕ್ಕೆ ನ್ಯಾಯವೆಲ್ಲಿ..??

ಕರ್ನಾಟಕದ ತಲಪ್ಪಾಡಿ ನಿವಾಸಿಗಳಿಗೆ ಸಿಗುವ ಉಚಿತ ಸಂಚಾರ ಸೌಲಭ್ಯ, ಹತ್ತಿರದ ಮಂಜೇಶ್ವರ ಪಂಚಾಯತ್ ನಿವಾಸಿಗಳಿಗೆ ಏಕೆ ಸಿಗುತ್ತಿಲ್ಲ?

ಸಂಸದರ ಮೌನವೇಕೆ?: ಕೇಂದ್ರದಲ್ಲಿ ತಮ್ಮದೇ ಸರ್ಕಾರವಿದ್ದರೂ, ಮಂಜೇಶ್ವರ ಜನರ ಮೇಲಿನ ಆರ್ಥಿಕ ಹೊರೆ ಇಳಿಸಲು ಸಂಸದರು ಯಾಕೆ ಪ್ರಭಾವ ಬೀರಲಿಲ್ಲ..? ಜನಪರ ಹೋರಾಟಕ್ಕೆ ದ್ರೋಹ ಎಸಗದಿರಿ: “ರಾಜಕೀಯ ಭೇದ ಮರೆತು ನಡೆದ ಈ ಹೋರಾಟದ ಫಲವನ್ನು ಸ್ವಾರ್ಥಕ್ಕಾಗಿ ಬಳಸುವುದು ಜನರಿಗೆ ಮಾಡುವ ದ್ರೋಹ. ಮಂಜೇಶ್ವರ ಜನತೆಗೆ ತಲಪ್ಪಾಡಿ ಟೋಲ್‌ನಲ್ಲಿ ಸಂಪೂರ್ಣ ರಿಯಾಯಿತಿ ಸಿಗುವವರೆಗೆ ಬಿಜೆಪಿಯ ‘ಟೋಲ್ ಮುಕ್ತ’ ಎಂಬ ಮಾತಿಗೆ ಅರ್ಥವಿಲ್ಲ” ಎಂದು ಅವರು ಎಚ್ಚರಿಸಿದ್ದಾರೆ.

About The Author

Leave a Reply