February 10, 2026
WhatsApp Image 2026-02-10 at 11.24.50 AM

ಬಜ್ಪೆ : ಸುಂಕದಕಟ್ಟೆ ನವರಂಗ ಕಾಂಪೌಂಡ್ ಸಮೀಪದ ರಸ್ತೆ ಬದಿಯ ಚರಂಡಿಯಲ್ಲಿ ಕಳೆದ ಆರು ವರ್ಷಗಳಿಂದ ಮಣ್ಣು ತುಂಬಿಕೊಂಡಿರುವುದರಿಂದ, ಮಳೆಗಾಲದ ಸಮಯದಲ್ಲಿ ಮಳೆಯ ನೀರು ಸರಾಗವಾಗಿ ಹರಿಯದೆ ರಸ್ತೆಯ ಮೇಲೆಯೇ ಹರಿದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಪರಿಣಾಮವಾಗಿ ಸ್ಥಳೀಯ ನಾಗರಿಕರು ಪ್ರತಿವರ್ಷ ಎರಡು ಬಾರಿ ತಾತ್ಕಾಲಿಕವಾಗಿ ಮಣ್ಣು ಹಾಕುವ ಮೂಲಕ ಸಮಸ್ಯೆಯನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.


ಈ ಗಂಭೀರ ಸಮಸ್ಯೆಯ ಕುರಿತು ಸ್ಥಳೀಯ ನಾಗರಿಕರು ಒಟ್ಟಾಗಿ ಪಿಡಬ್ಲ್ಯೂಡಿ ಇಂಜಿನಿಯರನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿದ್ದು, ಶಾಶ್ವತ ಪರಿಹಾರವಾಗಿ ಸಮರ್ಪಕ ಚರಂಡಿ ವ್ಯವಸ್ಥೆ ಹಾಗೂ ಪರ್ಯಾಯ ರಸ್ತೆ ನಿರ್ಮಾಣ ಅಗತ್ಯವಿದೆ ಎಂದು ಮನವಿ ಸಲ್ಲಿಸಲಾಗಿದೆ. ಈ ವಿಷಯವನ್ನು ಪಂಚಾಯಿತಿ ವಾರ್ಡ್ ಸಭೆಯಲ್ಲಿಯೂ ಲಿಖಿತವಾಗಿ ದಾಖಲಿಸಲಾಗಿದೆ.


ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಹಣ ಮಂಜೂರಾಗಿ ಈಗಾಗಲೇ ಏಳು ತಿಂಗಳು ಕಳೆದಿದ್ದರೂ, ಇನ್ನೂ ಕಾಮಗಾರಿ ಪ್ರಾರಂಭವಾಗದೇ ಇರುವುದರಿಂದ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಹಾಗೂ ಆತಂಕ ಹೆಚ್ಚಾಗಿದೆ.


ಇದೇ ಸಂದರ್ಭದಲ್ಲಿ ಸೌಹಾರ್ದನಗರದ ಮುಖ್ಯ ರಸ್ತೆ ಕಾಂಕ್ರಿಟೀಕರಣಗೊಂಡ ಬಳಿಕ ರಸ್ತೆ ಬದಿಯಲ್ಲಿ ಮಣ್ಣು ತುಂಬಿದ್ದರಿಂದ, ಅಲ್ಲಿಂದ ಸಂಚರಿಸುವ ವಾಹನಗಳ ಅಡಿಭಾಗಕ್ಕೆ ತಾಗುವ ಅಪಾಯ ಎದುರಾಗಿತ್ತು. ಈ ಸಮಸ್ಯೆಯನ್ನು ಪಿಡಬ್ಲ್ಯೂಡಿ ಇಂಜಿನಿಯರ್ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ ಪರಿಣಾಮವಾಗಿ, ನಿನ್ನೆ ಕಾಂಕ್ರಿಟ್ ಮೂಲಕ ಮರುಜೋಡಣೆ ಕಾರ್ಯ ಕೈಗೊಳ್ಳಲಾಗಿದೆ.
ಆದರೆ ಅದೇ ರೀತಿಯ ಗಂಭೀರ ಸಮಸ್ಯೆ ಎದುರಿಸುತ್ತಿರುವ ಸುಂಕದಕಟ್ಟೆ ನವರಂಗ ಕಾಂಪೌಂಡ್ ರಸ್ತೆಯ ಕಾಮಗಾರಿ ಇನ್ನೂ ಪ್ರಾರಂಭವಾಗದೇ ಇರುವುದರಿಂದ, ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕಾಮಗಾರಿ ಆರಂಭಿಸಬೇಕೆಂದು ಎರಡನೇ ಬಾರಿ ಮನವಿ ಸಲ್ಲಿಸಲಾಗಿದೆ.


ಮಾನ್ಯ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಸ್ಥಿಕೆ ವಹಿಸಿ, ಸುಂಕದಕಟ್ಟೆ – ನವರಂಗ ಕಾಂಪೌಂಡ್ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಆದಷ್ಟು ಬೇಗ ಪ್ರಾರಂಭಿಸಿ, ಮಳೆಗಾಲದ ಮುನ್ನ ಸಾರ್ವಜನಿಕರಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ತುಳುನಾಡ ರಕ್ಷಣಾ ವೇದಿಕೆ ಹಾಗೂ ಸ್ಥಳೀಯ ನಾಗರಿಕರ ಪರವಾಗಿ ಕಳಕಳಿಯಿಂದ ಆಗ್ರಹಿಸುತ್ತೇನೆ ಎಂದು ಎಸ್‌ಡಿಪಿಐ ಮುಖಂಡ ಅಬ್ದುಲ್ ಹಮೀದ್ ಕೊಳಂಬೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply