February 15, 2026
WhatsApp Image 2026-02-15 at 9.51.50 AM

ಉಡುಪಿ : ಕ್ಷುಲ್ಲಕ ಕಾರಣಕ್ಕೆ ಎನ್‌ಎಸ್ ಯು ಐ ಜಿಲ್ಲಾ ನಾಯಕ ಶರತ್ ಕುಂದರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕುಂಜಿಬೆಟ್ಟು ನಿವಾಸಿ ಅಕ್ಷತ್ ಪೈ (27), ಸುಶಾಂತ್ (25), ರಮಾನಂದ ಪೈ (42), ಸಂತೋಷ್ ಕೊರಗ (38), ಅಲೆವೂರು ನಿವಾಸಿ ಶಂಶಾಂಕ್ ನಾಯಕ್ (25) ಎಂದು ಗುರುತಿಸಲಾಗಿದೆ.

ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರು ಹಾಗೂ ಎರಡು ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಜ.30ರಂದು ರಾತ್ರಿ 9 ಗಂಟೆ ಸುಮಾರಿಗೆ ಚಿಟ್ಟಾಡಿ ಬೈಲೂರು ಬಡಗುಬೆಟ್ಟು ನಿವಾಸಿ ಶರತ್ ಕುಂದರ್(25) ತಮ್ಮ ಸ್ನೇಹಿತನ ಕಾರಿನಲ್ಲಿ ಮಣಿಪಾಲದ ಹೋಟೆಲ್‌ಗೆ ಊಟಕ್ಕೆ ತೆರಳಿದ್ದರು. ಅಲ್ಲಿ ಅಕ್ಷತ್ ಪೈ, ಶಶಾಂಕ್ ಹಾಗೂ ಉಡುಪಿಯ ರಾಧಾಕೃಷ್ಣ ಜನರಲ್ ಸ್ಟೋರ್ ಮಾಲಕರ ಮಗನೊಂದಿಗೆ ಸಣ್ಣ ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದಿದೆ.

ನಂತರ ಶರತ್ ಕುಂದರ್ ಮನೆಗೆ ವಾಪಸ್ಸಾಗುತ್ತಿದ್ದಾಗ ಕಲ್ಸಂಕ ಬಳಿ ತಲುಪುವ ಸಂದರ್ಭ ಅಕ್ಷತ್ ಪೈ ಕರೆ ಮಾಡಿ, ಹೋಟೆಲಿನ ಗಲಾಟೆ ವಿಚಾರವಾಗಿ ಮಾತನಾಡಲು ಪಿಪಿಸಿ ಕ್ರಾಸ್ ಬಳಿ ನಿಲ್ಲುವಂತೆ ತಿಳಿಸಿದ್ದಾನೆ. ರಾತ್ರಿ ಸುಮಾರು 11.30ರ ವೇಳೆಗೆ ಪಿಪಿಸಿ ಕ್ರಾಸ್ ಸಮೀಪ ರಸ್ತೆಯ ಬದಿಯಲ್ಲಿ ಶರತ್ ಕುಂರ್ದ ತಮ್ಮ ಸ್ನೇಹಿತರಾದ ಧ್ರುವಾ, ಸಿಲಾನ್ ಗಗನ್ ಹಾಗೂ ರೋಹಿತ್ ಜೊತೆ ಮಾತನಾಡುತ್ತ ನಿಂತಿದ್ದ ವೇಳೆ ಎರಡು ವಾಹನಗಳು ಏಕಾಏಕಿ ಬಂದು ನಿಂತಿವೆ.

ವಾಹನಗಳಿಂದ ಇಳಿದ ಅಕ್ಷತ್ ಪೈ, ಶಶಾಂಕ್ ಸೇರಿದಂತೆ 6-7 ಮಂದಿ ಕೈಯಲ್ಲಿ ತಲವಾರಿನಂತಹ ಆಯುಧ ಹಾಗೂ ಕಬ್ಬಿಣದ ಚೈನ್ ಹಿಡಿದು ಶರತ್ ಕುಂರ್ದ ಮೇಲೆ ಹಲ್ಲೆ ನಡೆಸಿದರೆಂದು ದೂರಿನಲ್ಲಿ ತಿಳಿಸಲಾಗಿದೆ.

ಹಲ್ಲೆ ಬಳಿಕ ಆರೋಪಿಗಳು ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದರು. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

About The Author

Leave a Reply