February 19, 2026
WhatsApp Image 2026-02-19 at 8.56.06 AM

ವಿಟ್ಲ: ರಕ್ಷ ಪರೀಕ್ಷೆ ನಡೆಸಿ ನೀಡಲಾದ ಪ್ರಯೋಗಾಲಯದ ವರದಿಯಲ್ಲಿ, ರಕ್ತದ ಪ್ಲೇಟ್ಲೆಟ್ಸ್‌  ಸಂಖ್ಯೆಯಲ್ಲಿ ಬಹಳಷ್ಟು ವ್ಯತ್ಯಾಸ ಕಂಡು ಬಂದ ಹಿನ್ನೆಲೆ ವಿಚಾರಿಸಲು ಹೋದಾಗ ಉಡಾಫೆಯ ಉತ್ತರ ನೀಡಿರುವ ವಿಚಾರಕ್ಕೆ ಸಂಬಂಧಿಸಿ ಸಂತ್ರಸ್ತ ವ್ಯಕ್ತಿ ವಿಟ್ಲ ಚಂದಳಿಕೆಯಲ್ಲಿರುವ ರಕ್ಷಾ ಕ್ಲಿನಿಕ್ ಆಂಡ್ ಲ್ಯಾಬೋರೇಟರಿಯ ವಿರುದ್ಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಬಂಟ್ವಾಳ ತಾಲೂಕು ಬದನಾಜೆ ಸಮೀಪದ ನಿವಾಸಿಯಾಗಿರುವ ಕಿಯಾನ್ ಹರ್ಬಲ್ ಸೆಂಟರ್ ಕಂಪೆನಿಯ ಮಾಲೀಕ ಡಾ.ಶರತ್ ಶೆಟ್ಟಿಯವರು ದೂರು ನೀಡಿದವರು. ವಿಟ್ಲ-ಕಬಕ ರಸ್ತೆಯ ಚಂದಳಿಕೆ ಪರಿಸರದ ರಕ್ಷಾ ಕ್ಲಿನಿಕ್ ಆಂಡ್ ಲ್ಯಾಬೋರೇಟರಿಯಲ್ಲಿ ಸಿಬಿಸಿ ರಕ್ತ ಪರೀಕ್ಷೆಯನ್ನು ಮಾಡಿಸಿದ್ದೇನೆ. ಬೆಳಗ್ಗೆ ಸುಮಾರು 10.50 ಗಂಟೆಗೆ ನಾನು ರಕ್ತ ನೀಡಿದ್ದು, ಅದರ ಸಂಪೂರ್ಣ ರಿಪೋರ್ಟ್ ನನಗೆ 11.03 ಗಂಟೆಗೆ ವಾಟ್ಸಪ್ ಮೂಲಕ ಕಳಿಸಿದ್ದಾರೆ. ಆ ರಿಪೋರ್ಟ್‌ನಲ್ಲಿ ಹಿಮೋಗ್ಲೋಬಿನ್ 14 ತೋರಿಸುತ್ತಿದೆ. ಹಾಗೆಯೇ ಪ್ಲೇಟ್ಲೆಟ್ಸ್  18,000 ತೋರಿಸುತ್ತಿದೆ.ಆ ರಿಪೋರ್ಟ್‌ನ್ನು ನೋಡಿ ಕೂಡಲೇ ರಕ್ಷಾ ಕ್ಲಿನಿಕ್‌ಗೆ ಕರೆ ಮಾಡಿ ನೀವು ಮಾಡಿರುವ ರಿಪೋರ್ಟ್ ಸರಿ ಇದೆಯೇ ಎಂದು ಕೇಳಿದಾಗ ಅಲ್ಲಿಯ ಸಿಬ್ಬಂದಿ, ನಾವು ಮಾಡಿರುವ ರಿಪೋರ್ಟ್ ಸರಿ ಇದೆ. ನೀವು ಬೇರೆ ಎಲ್ಲಿ ಸಹ ಮಾಡಿಸಿ ತೊಂದರೆ ಇಲ್ಲ. ನಾವು ನಮ್ಮ ವೈದ್ಯರಲ್ಲಿ ತೋರಿಸಿ ನಿಮಗೆ ರಿಪೋರ್ಟ್ ವಾಟ್ಸಾಪ್ ಮುಖಾಂತರ ಕಳಿಸಿದ್ದೇವೆ ಎಂದು ಹೇಳಿದ್ದರು. ಆದರೆ ರಿಪೋರ್ಟ್‌ನಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ನಾನು ವಿಟ್ಲದ ಧನ್ವಂತರಿ ಹಾಗೂ ವಿಕೇ‌ರ್ ಲ್ಯಾಬ್‌ನಲ್ಲಿ ಪೇಟ್ಲೆಟ್ಸ್ ರಕ್ತ ಪರೀಕ್ಷೆಯನ್ನು ಮಾಡಿಸಿದೆ.

ಆದರೆ ಅಲ್ಲಿನ ವರದಿಯಲ್ಲಿ 1 ಲಕ್ಷ ಮತ್ತು ಧನ್ವಂತರಿ ಲ್ಯಾಬೋರೇಟರಿಯಲ್ಲಿ 1.13ಲಕ್ಷ ಪ್ಲೇಟ್ಲೆಟ್ಸ್  ತೋರಿಸಿದೆ. ಕೂಡಲೇ ನಾನು ಚಂದಳಿಕೆ ರಕ್ಷಾ ಕ್ಲಿನಿಕ್ ಮತ್ತು ಲ್ಯಾಬೋರೇಟರಿಗೆ ಬಂದು, ರಿಪೋರ್ಟ್‌ಗೆ ಸಹಿ ಹಾಕಿ ಕೊಡಿ ಎಂದು ಕೇಳಿದಾಗ ಅಲ್ಲಿಯ ವೈದ್ಯರು ನಿರಾಕರಿಸಿದ್ದಾರೆ. ಅಲ್ಲದೆ ಉಡಾಫೆಯಾಗಿ ಮಾತನಾಡಿದ್ದಾರೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೆ ಈ ಬಗ್ಗೆ ದೂರು ನೀಡಲು ವಿಟ್ಲ ಪೋಲಿಸ್ ಠಾಣೆಗೆ ದೂರು ನೀಡಲು ಹೋದಾಗ ರಕ್ಷಾ ಲ್ಯಾಬೋರೇಟರಿ ಮಾಲೀಕರಾದ ಚಿನ್ಮಯ್ ಅವರೂ ಪೊಲೀಸರೊಂದಿಗೆ ಉಡಾಫೆಯಾಗಿ ಮಾತನಾಡಿದ್ದಾರೆ. ಬಳಿಕ ನಾನು ಆರೋಗ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇನೆ ಎಂದಿದ್ದಾರೆ. ಅಲ್ಲದೆ ಲೋಕಾಯುಕ್ತರಿಗೆ ಮತ್ತು ಆರೋಗ್ಯ ಸಚಿವರಿಗೆ ದೂರು ನೀಡುವುದಾಗಿ ಡಾ.ಶರತ್ ಶೆಟ್ಟಿ ತಿಳಿಸಿದ್ದಾರೆ.

About The Author

Leave a Reply