

ಮಂಗಳೂರು: ಮಹಾರಾಷ್ಟ್ರದ ರತ್ನಗಿರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮುಡಿಪು ಸಮೀಪದ ಬೋಳಿಯಾರ್ ನಿವಾಸಿ ವಿವಾಹಿತ ಯುವಕ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಬೋಳಿಯಾರ್ ನಿವಾಸಿ ಬಿ.ಎಚ್ ಕರೀಂ ಎಂಬವರ ಪುತ್ರ ಮುಹಮ್ಮದ್ ರಿಝ್ವಾನ್ (28) ಮೃತರು ಎಂದು ಪೊಲೀಸರು ತಿಳಿಸಿದ್ದಾರೆ.

ಹಲವಾರು ವರ್ಷಗಳಿಂದ ಕಂಪನಿಯೊಂದರ ಮೀನಿನ ಲಾರಿಯಲ್ಲಿ ಚಾಲಕನಾಗಿ ದುಡಿಯುತ್ತಿದ್ದ ರಿಝ್ವಾನ್ ಮಹಾರಾಷ್ಟ್ರಕ್ಕೆ ಮೀನಿನ ಲೋಡ್ ಕೊಂಡೊಯ್ಯುತ್ತಿದ್ದಾಗ ಮಹಾರಾಷ್ಟ್ರದ ರತ್ನಗಿರಿ ಎಂಬಲ್ಲಿ ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ

ಮೃತರು ತಂದೆ, ತಾಯಿ, ಪತ್ನಿ, ಎರಡು ವರ್ಷದ ಮಗು ಹಾಗೂ ಮೂವರು ಸಹೋದರು, ಮೂವರು ಸಹೋದರಿಯರನ್ನು ಅಗಲಿದ್ದಾರೆ. ಮೃತದೇಹವು ಬುಧವಾರ ಬೆಳಿಗ್ಗೆ ಊರಿಗೆ ತಲುಪಲಿದ್ದು ಬೋಳಿಯಾರ್ ಕೇಂದ್ರ ಮಸೀದಿಯ ವಠಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.






