February 27, 2026
WhatsApp Image 2026-02-27 at 4.16.43 PM

ಬಂಟ್ವಾಳ: ಮೂಡೂರು- ಪಡೂರು ಜೋಡುಕರೆ ಕಂಬಳ ಸಮಿತಿ ಬಂಟ್ವಾಳ ಇದರ ವತಿಯಿಂದ ಮಾರ್ಚ್ 7 ಮತ್ತು 8 ರಂದು ನಾವೂರ ಕೂಡಿಬೈಲು ಎಂಬಲ್ಲಿನ ಮೂಡೂರು -ಪಡೂರು ಜೋಡುಕರೆಯಲ್ಲಿ 15 ನೇ ವರ್ಷದ “ಬಂಟ್ವಾಳ ಕಂಬಳ” ನಡೆಯಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಮಾಜಿ ಸಚಿವ, ಕಂಬಳ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ ಹೇಳಿದರು.

ಅವರು ಬಿಸಿರೋಡಿನಲ್ಲಿ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬೆಳಗ್ಗೆ 8.45ಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಸೋಲೂರು ಮಹಾಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಬಾರ್ಕೂರು ಮಹಾಸಂಸ್ಥಾನದ ಶ್ರೀ ವಿದ್ಯಾವಾಚಸ್ಪತಿ ಡಾ. ಸಂತೋಷ್ ಗುರೂಜಿ, ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ, ಅಲ್ಲಿಪಾದೆ ಚರ್ಚ್‌ ಧರ್ಮಗುರು ವಂ.ರಾಬರ್ಟ್ ಡಿಸೋಜ ಭಾಗವಹಿಸಲಿದ್ದಾರೆ.ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಗೃಹ ಸಚಿವ ಡಾ.ಜಿ.ಪರಮೇಶ್ವರ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕಾಸರಗೋಡು ಲೋಕಸಭಾ ಸದಸ್ಯ ರಾಜ್ ಮೋಹನ್ ಉನ್ನಿತಾನ್, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಮುಖ್ಯ ಸಚೇತಕ ಸಲೀಮ್ ಆಹಮ್ಮದ್ ಸಹಿತ ಅನೇಕ ಸಚಿವರು,ಧಾರ್ಮಿಕ,ಸಾಮಾಜಿಕ ಮುಖಂಡರು ಕಂಬಳ ಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಬಂಟ್ವಾಳ ಕಂಬಳ ಎಂಬುದು ಹಬ್ಬದ ರೀತಿಯಲ್ಲಿ ಆಚರಣೆಯಾಗಬೇಕು ಎಂಬ ನಿಟ್ಟಿನಲ್ಲಿ ಹಲವು ವಿಶೇಷತೆಗಳೊಂದಿಗೆ ಕಂಬಳ ನಡೆಯಲಿದೆ ಎಂದ ಅವರು, ಮೂಡೂರು- ಪಡೂರು ಕಂಬಳ ವಿಶೇಷತೆ ಜೊತೆ ಹೊಸತನದೊಂದಿಗೆ ಕಳೆದ 15 ವರ್ಷಗಳಿಂದ ನಡೆಯುತ್ತಾ ಬಂದಿವೆ, ಬಹುಬೇಡಿಕೆಯ ಸಿನಿತಾರೆಗಳು , ರಾಜಕೀಯ , ಸಾಮಾಜಿಕ ನೇತಾರರು ಕಂಬಳಕ್ಕೆ ಆಗಮಿಸಿ ಮೆರುಗು ನೀಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದ್ದು,ಮೂಡೂರು- ಪಡೂರು ಕಂಬಳಕ್ಕೆ ಸರಸಾಟಿಯಾಗಿರುವ ಇನ್ನೊಂದು ಕಂಬಳ ಇಲ್ಲ ಎಂಬ ರೀತಿಯಲ್ಲಿ ಆಯೋಜನೆ ಮಾಡುತ್ತಾ ಬಂದಿದ್ದೇವೆ ಎಂದರು.

ಕಂಬಳ ಕ್ಕೆ ಪೂರಕವಾಗಿ ಶಾಶ್ವತ ವೇದಿಕೆಯನ್ನು ನಿರ್ಮಾಣ ಮಾಡಲಾಗಿದ್ದು, ಸುಸಜ್ಜಿತ ವ್ಯವಸ್ಥೆಯೊಂದಿಗೆ ಕಂಬಳಕ್ಕೆ ಬಂದು ಹೋಗುವ ಅಭಿಮಾನಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸಂಚಾರಕ್ಕೆ ಅಡಚಣೆಯಾಗದಂತೆ , ಒತ್ತಾಯದ ಮೇರೆಗೆ ಪಾಂಗೋಡಿ ಎಂಬಲ್ಲಿಂದ ಹೊಸರಸ್ತೆಯನ್ನು ನಿರ್ಮಿಸಲಾಗಿದೆ, ವಾಹನ ಪಾರ್ಕಿಂಗ್ ಗಾಗಿ ಆ ಭಾಗದ ಎಲ್ಲಾ ಗದ್ದೆಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಈ ಬಾರಿಯ ಹೊಸತನ ಎಂಬಂತೆ ಕಂಬಳ ಕೂಟದ ವೇಳೆ ಆಹಾರ ಮೇಳವನ್ನು ಹಮ್ಮಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.

ಕಂಬಳ ಸಮಿತಿ ಅಧ್ಯಕ್ಷ ಪಿಯುಸ್ ಎಲ್. ರೋಡ್ರಿಗಸ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್‌ ಶೆಟ್ಟಿ, ಸಂಚಾಲಕ ಬಿ.ಪದ್ಮಶೇಖರ ಜೈನ್, ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತೂರು, ಕೋಶಾಧಿಕಾರಿ ಫಿಲಿಪ್ ಪ್ರೇಂಕ್, ಉಪಾಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸುದರ್ಶನ ಜೈನ್, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಅಬ್ಬಾಸ್ ಆಲಿ, ಪ್ರಮುಖರಾದ ಇಬ್ರಾಹಿಂ ನವಾಝ್ ಬಡಕಬೈಲ್ , ಶೈಲೇಶ್ ಪೂಜಾರಿ ಹಾಗೂ ಕಂಬಳ ಸಮಿತಿಯ ನಾನಾ ಪದಾಧಿಕಾರಿಗಳು, ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.

About The Author

Leave a Reply