

ಉಡುಪಿ: ಪೊಲೀಸ್ ಮ್ಯಾರಥಾನ್ ವೇಳೆ ಕುಂದಾಪುರ ಗ್ರಾಮಾಂತರ ಠಾಣಾಧಿಕಾರಿ ನಾಸಿರ್ ಹುಸೇನ್(58) ಕುಸಿದು ಬಿದ್ದು ಎಸ್‌ಐ ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಇಂದು ಪೊಲೀಸ್ ಇಲಾಖೆ ‘ಜಿಲ್ಲಾ ಪೊಲೀಸ್ ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಎಂಬ ಘೋಷ ವಾಕ್ಯದೊಂದಿಗೆ ಮ್ಯಾರಥಾನ್ ಆಯೋಜಿಸಲಾಗಿತ್ತು. ಡ್ರಗ್ಸ್ ಮುಕ್ತ ಕರ್ನಾಟಕ ಧ್ಯೇಯದೊಂದಿಗೆ ಓಟ ಆರಂಭಗೊಂಡಿತ್ತು. ನಗರದ ತಾಲೂಕು ಪಂಚಾಯತ್ ಮುಂಭಾಗದ ರಸ್ತೆಯಲ್ಲಿ ಎಸ್‌ಐ ಕುಸಿದುಬಿದ್ದಿದ್ದು, ಕೂಡಲೇ ಅವರನ್ನು ಪಕ್ಕದಲ್ಲೇ ಇದ್ದ ಡಾ.ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ನಾಸಿರ್ ಹುಸೇನ್ ಸಾವನ್ನು ಆಸ್ಪತ್ರೆ ವೈದ್ಯರು ದೃಢಪಡಿಸಿದರು ಎನ್ನಲಾಗಿದೆ.

ನಾಸಿರ್ ಹುಸೇನ್ ಅವರು ಉಡುಪಿ ಜಿಲ್ಲೆಯ ಅಮಾಸೆಬೈಲು, ಕುಂದಾಪುರ ನಗರ, ಕುಂದಾಪುರ ಸಂಚಾರ ಠಾಣೆ, ಶಂಕರನಾರಾಯಣ, ಕಾರ್ಕಳ ಗ್ರಾಮಾಂತರ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಇವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.






