

ಮಂಗಳೂರು: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನೊಬ್ಬನ ಶವ ಕೊಣಾಜೆ ಠಾಣಾ ವ್ಯಾಪ್ತಿಯ ಸೋಮೇಶ್ವರ ಕೆರೆಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ.
ಕೊಣಾಜೆ ಗ್ರಾಮ ಮುಚ್ಚಿಲಕೋಡಿ ಮನೆ ನಿವಾಸಿ ದಿನೇಶ್ ಶೆಟ್ಟಿಗಾರ್ ಎಂಬವರ ಪುತ್ರ ವಿವೇಕ್ ಶೆಟ್ಟಿಗಾರ್ (32) ಮೃತ ಯುವಕ. ವಿವೇಕ್ ಶೆಟ್ಟಿಗಾರ್ ಅವರು ಮಂಗಳೂರಿನ ಕದ್ರಿ ಬಳಿ ಇರುವ ವೇದ ಮೊರ್ಟಾಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಕೆಲಸಕ್ಕೆ ತೆರಳಿ ರಾತ್ರಿ 9 ಗಂಟೆಗೆ ಮನೆಗೆ ವಾಪಸ್ಸಾಗುತ್ತಿದ್ದರು.

ಅದರಂತೆ ಮಾರ್ಚ್ 9ರಂದು ಬೆಳಿಗ್ಗೆ 11 ಗಂಟೆಗೆ ಕೆಲಸಕ್ಕೆ ತೆರಳಿದ್ದ ವಿವೇಕ್ ರಾತ್ರಿ ಸುಮಾರು 9.30ಕ್ಕೆ ತಾಯಿಗೆ ದೂರವಾಣಿ ಕರೆ ಮಾಡಿ ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದರು. ರಾತ್ರಿ 12 ಗಂಟೆಯಾದರೂ ಮನೆಗೆ ವಾಪಸ್ಸಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅವರ ಮೊಬೈಲ್‌ಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿಲ್ಲ.
ಮರುದಿನ ಮಾರ್ಚ್ 10ರಂದು ಕೂಡ ಮೊಬೈಲ್‌ಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿಲ್ಲ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಅವರ ಶವ ಸೋಮೇಶ್ವರ ಕೆರೆಯಲ್ಲಿ ಪತ್ತೆಯಾಗಿದೆ. ನಾಪತ್ತೆಯಾದ ದಿನವೇ ವಿವೇಕ್ ತಮ್ಮ ಸ್ಕೂಟರನ್ನು ಸೋಮೇಶ್ವರ ರಥದ ಕೊಠಡಿ ಸಮೀಪ ನಿಲ್ಲಿಸಿದ್ದು ಕಂಡುಬOದಿದೆ.
ಅಲ್ಲಿಯೇ ಅವರ ಮೊಬೈಲ್ ಫೋನ್ ಹಾಗೂ ಚಪ್ಪಲಿಗಳನ್ನು ಇಟ್ಟು ನಾಪತ್ತೆಯಾಗಿದ್ದರು. ವಿವೇಕ್ ಶೆಟ್ಟಿಗಾರ್ ಅವರು ಸುಮಾರು ಎಂಟು ತಿಂಗಳ ಹಿಂದೆ ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದರು.






