

ಸುಳ್ಯ: ಸರ್ಕಾರಿ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಶ್ರೀರಾಂ ಪೇಟೆಯ ಬಳಿ ಇಂದು ಮಧ್ಯಾಹ್ನ ನಡೆದಿದೆ.ಕೊಡಿಯಾಲ್‌ಬೈಲ್‌ನಲ್ಲಿರುವ ಸರ್ಕಾರಿ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಮಂಜು (42) ಮೃತರು.
ಮೂಲತಃ ಕೆ.ಆರ್. ನಗರದವರಾದ ಮಂಜು ಅವರು ಕಳೆದ ಎರಡು ವರ್ಷಗಳಿಂದ ಸುಳ್ಯದ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇಂದು ಮಧ್ಯಾಹ್ನದವರೆಗೂ ಸಹೋದ್ಯೋಗಿಗಳ ಜೊತೆ ಲವಲವಿಕೆಯಿಂದಲೇ ಮಾತನಾಡಿದ್ದ ಅವರು, “ಸ್ವಲ್ಪ ಹುಷಾರಿಲ್ಲ, ವಿಶ್ರಾಂತಿ ಪಡೆದು ಬರುತ್ತೇನೆ” ಎಂದು ಹೇಳಿ ಮನೆಗೆ ತೆರಳಿದ್ದರು.

ಹೀಗೆ ಹೋದವರು ಮನೆಯಿಂದ ಔಷಧಿಗಾಗಿ ಮೆಡಿಕಲ್ ಸ್ಟೋರ್‌ಗೆ ಬಂದಿದ್ದ ಸಂದರ್ಭದಲ್ಲಿ ಶ್ರೀರಾಂ ಪೇಟೆಯ ಬಳಿ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ






